

ಹುಬ್ಬಳ್ಳಿ: ಯೂಕ್ರೇನ್ನಲ್ಲಿ ಸಿಲುಕಿದ್ದ ಕುಂದಗೋಳ ತಾಲೂಕಿನ ಯರಗುಪ್ಪಿ ಮೂಲದ ಚೈತ್ರಾ ಸಂಶಿ ಸುರಕ್ಷಿತವಾಗಿ ಇಂದು ಹೆತ್ತವರ ಮಡಿಲು ಸೇರಿದರು.
ಬೆಂಗಳೂರಿನಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಮಾನದಲ್ಲಿ ಆಗಮಿಸಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಚೈತ್ರಾ ಅವರಿಗೆ ಸಿಎಂ ಹೂಗುಚ್ಛ ನೀಡಿ, ಸಿಹಿ ತಿನ್ನಿಸುವ ಮೂಲಕ ಶುಭ ಕೋರಿದರು.
ಚೈತ್ರಾ ತಂದೆ ಗಂಗಾಧರ ಹಾಗೂ ತಾಯಿ ಸುನಂದಾ ಮಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಯೂಕ್ರೇನ್ನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಚೈತ್ರಾ ಬಂಕರ್ನಲ್ಲಿ ರಕ್ಷಣೆ ಪಡೆದಿದ್ದರು. ಭಾರತ ಸರ್ಕಾರದ ನೆರವಿನಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಿದ್ದಾರೆ.
ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕೆಲಸ ನಡೆದಿದೆ. ನಾಲ್ಕೈದು ರಾಷ್ಟ್ರಗಳೊಂದಿಗೆ ಮೋದಿಯವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ನವೀನ್ ಮೃತದೇಹ ಕರೆತರುವ ಕಾರ್ಯವೂ ನಡೆದಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.