

ಆಂಟಿಗುವಾ: ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸಮತೋಲಿತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ರೋಚಕಗೆಲುವು ದಾಖಲಿಸುವ ಮೂಲಕ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಐದನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆಲ್ಲುವ ಮೂಲಕ ಭಾರತ ದಾಖಲೆ ಬರೆದಿದೆ.
ಆಂಟಿಗುವಾದ ನಾರ್ತ್ ಸೌಂಡ್ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಶನಿವಾರ (ಫೆ. 05) ನಡೆದ ಮಹತ್ವದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ನಿಗದಿತ 50 ಓವರ್ಗಳಲ್ಲಿ 189 ರನ್ಗಳ ಸಾಧಾರಣ ಮೊತ್ತಕ್ಕೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಜೇಮ್ಸ್ ರೆವ್ (95), ಜೇಮ್ಸ್ ಸೇಲ್ಸ್ (34*) ಮತ್ತು ಜಾರ್ಜ್ ಥಾಮಸ್ (27) ಹೊರತುಪಡಿಸಿದರೆ, ಉಳಿದ ಯಾವ ಆಟಗಾರನು ಉತ್ತಮ ನಿರ್ವಹಣೆ ತೋರಲಿಲ್ಲ. ಇದರಿಂದಾಗಿ ಆಂಗ್ಲರ ಪಡೆ ಸಾಧಾರಣ ಮೊತ್ತ ದಾಖಲಿಸಿತು.
ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲು ಆಂಗ್ಲರ ಪಡೆ ಸಂಪೂರ್ಣ ವಿಫಲವಾಯಿತು. 9.5 ಓವರ್ ಎಸೆದ ರಾಜಾ ಬಾವಾ 1 ಮೇಡನ್ನೊಂದಿಗೆ ಕೇವಲ 31 ರನ್ ನೀಡಿ 5 ವಿಕೆಟ್ ಕಬಳಿಸಿದರೆ, 9 ಓವರ್ ಎಸೆದ ರವಿಕುಮಾರ್ 1 ಮೇಡನ್ನೊಂದಿಗೆ ಕೇವಲ 34 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಉಳಿದಂತೆ ಕೌಶಲ್ ಥಾಂಬೆ 1 ವಿಕೆಟ್ ಪಡೆದರು.
ಇಂಗ್ಲೆಂಡ್ ನೀಡಿದ 190 ರನ್ಗಳ ಗುರಿ ಬೆನ್ನತ್ತಿದ ಭಾರತ 47.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕುವ ಮೂಲಕ ಅಮೋಘ ಗೆಲುವು ದಾಖಲಿಸಿತು.
ಆಂಗ್ಕ್ರಿಶ್ ರಘುವಂಶಿ ಎರಡನೇ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಆರಂಭದಲ್ಲೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ನೀಡಿದರು. ಹರ್ನೂರ್ ಸಿಂಗ್ (21) ಮತ್ತು ನಾಯಕ ಯಶ್ ಧುಲ್ (17) ಬೇಗ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಮತ್ತಷ್ಟು ಆತಂಕಕ್ಕೆ ದೂಡಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಬಂದು ಉಪನಾಯಕನ ಜವಬ್ದಾರಿಯುತ ಆಟವಾಡಿದ ಶೇಕ್ ರಶೀದ್ (50) ಅರ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾದರು.
ಮಧ್ಯಮ ಕ್ರಮಾಂಕದಲ್ಲಿ ಬಂದ ನಿಶಾಂತ್ ಸಂಧು ಅಜೇಯ 50 ರನ್ಗಳ ಅರ್ಧಶತಕದೊಂದಿಗೆ ಅಪತ್ಭಾಂದವ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲೂ ಅದ್ಭುತ ಪ್ರದರ್ಶನ ತೋರಿದ ರಾಜಾ ಬಾವ 35 ರನ್ ಗಳಿಸಿ, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಉಳಿದಂತೆ ಕೌಶಲ್ ಥಾಂಬೆ (1) ಮತ್ತು ದಿನೇಶ್ ಭಟ್ (13*) ರನ್ ಗಳಿಸಿದರು.
ಇಂಗ್ಲೆಂಡ್ ಪರ ಜೋಶುವಾ ಬೊಯ್ಡನ್, ಜೇಮ್ಸ್ ಸೇಲ್ಸ್ ಮತ್ತು ಥಾಮಸ್ ಆಸ್ಪಿನ್ವಾಲ್ ತಲಾ ಎರೆಡು ವಿಕೆಟ್ ಪಡೆದರು. (ಏಜೆನ್ಸೀಸ್)