ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನು ಸಹ ಹಾವು ಕಡಿತಕ್ಕೆ ಬಲಿ!

Snake
Published on

ಬಲರಾಮಪುರ: ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ವ್ಯಕ್ತಿಯು ಕೂಡ ಹಾವು ಕಡಿತಕ್ಕೊಳಗಾಗಿ ಸಾವಿಗೀಡಾಗಿರುವ ದುರಾದೃಷ್ಟಕರ ಘಟನೆ ಉತ್ತರ ಪ್ರದೇಶದ ಬಲರಾಮಪುರದಲ್ಲಿ ನಡೆದಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.

ಹಾವು ಕಡಿತದಿಂದ ಮೃತಪಟ್ಟ ಅಣ್ಣ ಅರವಿಂದ್​ ಮಿಶ್ರಾ (38) ಅಂತ್ಯಕ್ರಿಯೆಗೆಂದು ಗೋವಿಂದ ಮಿಶ್ರಾ (22) ಎಂಬಾತ ಬುಧವಾರ ಭವಾನಿಪುರಕ್ಕೆ ಬಂದಿದ್ದ. ವಿಧಿವಿಧಾನಗಳನ್ನು ಮುಗಿಸಿ ರಾತ್ರಿ ಮನೆಯಲ್ಲಿ ಮಲಗಿರುವಾಗ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಗೋವಿಂದನ ಜೊತೆಯಲ್ಲಿ ಸಂಬಂಧಿ ಚಂದ್ರಶೇಖರ್​ ಪಾಂಡೆ (22) ಮಲಗಿದ್ದ. ಆತನಿಗೂ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಲ್​ ಇನ್ಸ್​ಪೆಕ್ಟರ್​ ರಾಧಾ ರಮಣ್​ ಸಿಂಹ್​ ಮಂಗಳವಾರ ತಿಳಿಸಿದ್ದಾರೆ.

ಗೋವಿಂದ ಮಿಶ್ರಾ ಮತ್ತು ಚಂದ್ರಶೇಖರ್ ಪಾಂಡೆ ಇಬ್ಬರೂ ಅರವಿಂದ ಮಿಶ್ರಾ ಅವರ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಲುಧಿಯಾನದಿಂದ ಗ್ರಾಮಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ವೈದ್ಯಕೀಯ ಮತ್ತು ಆಡಳಿತ ಅಧಿಕಾರಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡಿದರು. ಸ್ಥಳೀಯ ಶಾಸಕ ಕೈಲಾಶ್ ನಾಥ್ ಶುಕ್ಲಾ ಅವರು ದುಃಖತಪ್ತ ಕುಟುಂಬವನ್ನು ಭೇಟಿಯಾಗಿ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶುಕ್ಲಾ ಅವರು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net