ರಾಜ್ಯಸಭೆಯ ಸಂಬಳ ರೈತರ ಮಕ್ಕಳ ಶಿಕ್ಷಣಕ್ಕೆ ಮೀಸಲು: ಹರ್ಭಜನ್​ ಸಿಂಗ್ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ!

Harbhajan
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಆಮ್​ ಆದ್ಮಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹರ್ಭಜನ್​ ಸಿಂಗ್​ ಸಮಾಜಮುಖಿ ಚಿಂತನೆಯುಳ್ಳ ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ್ದಾರೆ.

ತಮ್ಮ ರಾಜ್ಯಸಭಾ ಸ್ಥಾನದಿಂದ ಬರುವ ಸಂಬಳವನ್ನು ರೈತರ ಮಕ್ಕಳ ಕಲ್ಯಾಣ ಮತ್ತು ಶಿಕ್ಷಣಕ್ಕಾಗಿ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.

ಟ್ವೀಟ್​ ಮೂಲಕ ತಿಳಿಸಿರುವ ಅವರು ರಾಜ್ಯಸಭಾ ಸದಸ್ಯನಾಗಿ ನಾನು ನನ್ನ ಸಂಬಳವನ್ನು ರೈತರ ಮಕ್ಕಳ ಕಲ್ಯಾಣ ಮತ್ತು ಶಿಕ್ಷಣಕ್ಕೆ ನೀಡಲು ಬಯಸಿದ್ದೇನೆ. ದೇಶದ ಒಳಿತಿಗಾಗಿ ನಾನು ಈ ನಿರ್ಧಾರ ಮಾಡಿದ್ದು, ದೇಶಕ್ಕಾಗಿ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನು ನಾನು ಮಾಡುತ್ತೇನೆ. ಜೈ ಹಿಂದ್​ ಎಂದಿದ್ದಾರೆ.

ಆಮ್​ ಆದ್ಮಿ ಪಕ್ಷ ಇತ್ತೀಚೆಗೆ ಪಂಜಾಬ್​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಮಣಿಸಿ ಮೊದಲ ಬಾರಿಗೆ ಪಂಜಾಬ್​ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎಎಪಿ ಸರ್ಕಾರ ರಚಿಸಿದ ಬೆನ್ನಲ್ಲೇ ಹರ್ಭಜನ್​ ಸಿಂಗ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವಿರೋಧವಾಗಿ ರಾಜ್ಯಸಭೆಗೂ ಆಯ್ಕೆಯಾಗಿದ್ದಾರೆ. ಹರ್ಭಜನ್​ ಅವರು ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net