

ಗದಗ: ಇಂದು ಬೆಳಗ್ಗೆ ಗದಗಿನಲ್ಲಿ ಪತ್ತೆಯಾದ ಪೊಲೀಸ್ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಮುಂದೆ ಹಾಗೂ ಹಿಂದೆ ಬೇರೆ ಬೇರೆ ನಂಬರ್ ಇದ್ದಿದ್ದು, ಕೆಲ ಕಾಲ ಗೊಂದಲ ವಾತಾವರಣವನ್ನು ಸೃಷ್ಟಿ ಮಾಡಿತು.
ಗದಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಕಾರನ್ನು ನೋಡಿ ಬಹುತೇಕರು ಪೊಲೀಸ್ ಕಾರು ಅಂದುಕೊಂಡಿದ್ದರು. ಆದರೆ, ಕಾರಿನ ಹಿಂದೆ ಮತ್ತು ಮುಂದೆ ನಂಬರ್ ನೋಡಿ ಗಾಬರಿಯಾದರು. ಏಕೆಂದರೆ ಎರಡು ನಂಬರ್ ಬೇರೆ ಬೇರೆ ಆಗಿತ್ತು.
ಇದು ಪೊಲೀಸರ ಗಮನಕ್ಕೆ ಬಂದು ತಕ್ಷಣ ಪರಿಶೀಲಿಸಿದಾಗ ವಾಹನದ ಅಸಲಿಯತ್ತ ಬಯಲಾಗಿದೆ. ಶೂಟಿಂಗ್ಗೆ ಬಂದ ನಕಲಿ ಪೊಲೀಸ್ ಕಾರನ್ನು ನೋಡಿ ಜನರು ಕೆಲ ಕಾಲ ಗೊಂದಲಕ್ಕೀಡಾಗಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶೂಟಿಂಗ್ಗೆ ಕಾರನ್ನು ಬಳಸಲಾಗಿದೆ.
ಚಿತ್ರದಲ್ಲಿನ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಳಸುತ್ತಿದ್ದ ಬೊಲೆರೊ ಕಾರನ್ನು ರಸ್ತೆಯಲ್ಲಿ ಕಂಡು ಜನರು ತಬ್ಬಿಬ್ಬಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಂದ ಪರಿಶೀಲನೆ ನಡೆದಿದೆ. ಚಿತ್ರೀಕರಣ ಅನುಮತಿ ಪತ್ರ ಪರಿಶೀಲಿಸಿ ಬಳಿಕ ಕಾರನ್ನು ಬಿಟ್ಟು ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)