

ನವದೆಹಲಿ: ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಕಣ್ಣಿನ ಒಳಗೆ ಹುಳು ಬೆಳೆಯುತ್ತಿದೆ ಎಂಬ ಸಂದೇಶದೊಂದಿಗೆ ವ್ಯಕ್ತಿಯೊಬ್ಬರ ಕಣ್ಣಿನಿಂದ ಉದ್ದನೆಯ ಹುಳುವೊಂದನ್ನು ಆಪರೇಷನ್ ಮೂಲಕ ಹೊರ ತೆಗೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ವಿಡಿಯೋ ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ಪರಾವಲಂಬಿ ಜೀವಿಯನ್ನು ವ್ಯಕ್ತಿಯೊಬ್ಬರ ಕಣ್ಣಿನಿಂದ ಹೊರ ತೆಗೆಯಲಾಗುತ್ತಿದೆ. ತನ್ನ ಸ್ಮಾರ್ಟ್ ಫೋನ್ನಲ್ಲಿ ದೀರ್ಘ ಕಾಲದವರೆಗೆ ಗೇಮ್ ಆಗಿದ್ದರ ಪರಿಣಾಮ ಇದಾಗಿದೆ ಎಂದು ಬರೆಯಲಾಗಿದೆ. ವಿಡಿಯೋ ಫೇಸ್ಬುಕ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ವೈರಲ್ ಆಗಿರುವ ವಿಡಿಯೋ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ತಿಳಿದುಬಂದಿದೆ. ಗೂಗಲ್ ರಿವರ್ಸ್ ಸರ್ಚ್ ಇಂಜಿನ್ನಲ್ಲಿ ಸೂಕ್ತ ಕೀವರ್ಡ್ಸ್ ಸಹಾಯದಿಂದ ಹುಡುಕಾಡಿದಾಗ ವಿಡಿಯೋ ಕುರಿತಾದ ಅಸಲಿ ವಿಚಾರ ಬಯಲಾಗಿದೆ.
ಈ ವಿಡಿಯೋವನ್ನು 2013ರ ಏಪ್ರಿಲ್ 18ರಂದು ವೈದ್ಯರಾದ ಡಾ. ಅಶ್ಲೆ ಮುಲಮೂಟ್ಟಿಲ್ ಎಂಬುವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆಮ ಮುಲಮೂಟ್ಟಿಲ್ ಕೇರಳದ ಕಣ್ಣಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯ ಸರ್ಜನ್ ಆಗಿದ್ದಾರೆ. ಮೂಲ ವಿಡಿಯೋವನ್ನು ನೋಡಿದಾಗ ಅದರಲ್ಲಿ ಮುಲಮೂಟಿಲ್ ವಿವರಣೆ ನೀಡುದ್ದಾರೆ. ಅತಿಯಾದ ಕಣ್ಣಿನ ನೋವಿದ್ದ ರೋಗಿಗೆ ಆಪರೇಷನ್ ಮಾಡಲಾಯಿತು. ತುಂಬಾ ಸೂಕ್ಷ್ಮವಾಗಿ ನೋಡಿದಾಗ ರೋಗಿಯ ಕಣ್ಣಲ್ಲಿ ಜೀವಂತ ಹುಳು ಪತ್ತೆಯಾಯಿತು. ಕೊನೆಗೆ ಹೊರ ತೆಗೆದಾಗ ಸುಮಾರು 8 ಇಂಚು ಉದ್ದ ಇತ್ತು. ಅದನ್ನು ಲೋವಾ ಲೋವಾ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಪಶ್ಚಿಮ ಆಫ್ರಿಕದಲ್ಲಿ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.
ಕೆಲವೊಂದು ನೊಣಗಳಿಂದ ಈ ಲೋವಾ ಲೋವಾ ಹುಳು ಉತ್ಪತಿಯಾಗುತ್ತವೆ. ಈ ನೊಣಗಳು ಮಾನವನ ಚರ್ಮವನ್ನು ಚುಚ್ಚಿ ರಕ್ತವನ್ನು ಹೀರುತ್ತವೆ. ಹೀಗೆ ಮಾಡುವಾಗ ಹುಳುಗಳ ಲಾರ್ವಾಗಳನ್ನು ಮಾನವ ದೇಹಕ್ಕೆ ವರ್ಗಾಯಿಸುತ್ತವೆ. ಇದರಿಂದ ಹುಳುಗಳು ಕಣ್ಣು, ಮೆದುಳು, ಹೃದಯ, ಶ್ವಾಸಕೋಸ ಮತ್ತು ಚರ್ಮದ ಅಡಿಯಲ್ಲೂ ಬೆಳೆಯುತ್ತವೆ ಎಂದು ಹೇಳಿದ್ದಾರೆ.
ಇನ್ನು ಅತಿಯಾದ ಫೋನ್ ಬಳಕೆಯಿಂದ ಕಣ್ಣಿನಲ್ಲಿ ಹುಳ ಉತ್ಪತಿಯಾಗುವುದಲ್ಲಿ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಹಾಗಂತ ಫೋನ್ ಬಳಕೆ ಒಳ್ಳೆಯದಂತೂ ಅಲ್ಲ. ಹೆಚ್ಚು ಫೋನ್ ಬಳಕೆಯಿಂದ ನಿದ್ರಾಹೀನತೆ, ಮಾನಸಿಕ ಖಿನ್ನತೆ ಹಾಗೂ ಒತ್ತಡ ಸೇರಿದಂತೆ ಮುಂತಾದ ಕಾಯಿಲೆಗಳು ಬರುತ್ತವೆ. ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಹೇಳಿರುವಂತೆ ಅತಿಯಾದ ಫೋನ್ ಬಳಕೆಯಿಂದ ಕಣ್ಣಿನ ಒಳಗೆ ಹುಳು ಬೆಳೆಯುವುದಿಲ್ಲ. (ಏಜೆನ್ಸೀಸ್)