

ನವದೆಹಲಿ: ಹೋದೆಯಾ ಪಿಶಾಚಿ ಅಂದರೆ, ಬಂದೇ ಗವಾಕ್ಷೀಲಿ ಎಂಬಂತೆ ವಿಶ್ವದೆಲ್ಲೆಡೆ ಕರೊನಾ ರೂಪಾಂತರಿ ಒಮಿಕ್ರಾನ್ ತಲ್ಲಣ ಮೂಡಿಸಿದ್ದು, ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ. ಪ್ರತಿವರ್ಷವೂ ಕರೊನಾ ಊಸರವಳ್ಳಿಯಂತೆ ಬದಲಾಗುತ್ತಾ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದು, ಈ ಮಾರಿಗೆ ಕೊನೆ ಯಾವಾಗ ಎಂದು ಚಿಂತಿಸುವಂತಾಗಿದೆ. ಇದೀಗ ಹೊಸ ಅಧ್ಯಯನಗಳ ಸರಮಾಲೆಯಿಂದ ಆಶಾವಾದವೊಂದು ಹುಟ್ಟಿಕೊಂಡಿದ್ದು, ಒಮಿಕ್ರಾನ್ ರೂಪಾಂತರಿಯು ಕರೊನಾ ಸಾಂಕ್ರಮಿಕದ ಅಂತಿಮ ರೂಪ ಎಂದು ಹೇಳಲಾಗುತ್ತಿದೆ.
ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದ್ದರೂ, ಅದರ ಗಂಭೀರತೆ ಅಥವಾ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತುಂಬಾ ವಿರಳವಾಗಿದೆ. ಹೀಗಾಗಿ ಇದು ಕರೊನಾ ಬಗೆಗಿನ ಜನರ ಯೋಚನೆಯನ್ನು ತಗ್ಗಿಸುವ ಸಂಕೇತವೆಂದು ಕೆಲ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ನಾವೀಗ ಸಂಪೂರ್ಣ ವಿಭಿನ್ನ ಹಂತದಲ್ಲಿದ್ದೇವೆ. ವೈರಸ್ ಯಾವಾಗಲೂ ನಮ್ಮ ಜತೆಯಲ್ಲೇ ಸಾಗುತ್ತಿರುತ್ತದೆ. ಆದರೆ, ಈ ಒಮಿಕ್ರಾನ್ ರೂಪಾಂತರವು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಉಂಟುಮಾಡಿ, ಸಾಂಕ್ರಾಮಿಕ ರೋಗವನ್ನೇ ನಿಗ್ರಹಿಸುತ್ತದೆ ಎಂಬ ಭರವಸೆ ಇದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ರೋಗನಿರೋಧಕ ತಜ್ಞೆ ಮೋನಿಕಾ ಗಾಂಧಿ ತಿಳಿಸಿದ್ದಾರೆ.
ಒಮಿಕ್ರಾನ್ ರೂಪಾಂತರಿ ಕೇವಲ ಒಂದು ತಿಂಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು. ಅಲ್ಲಿ ಪರಿಸ್ಥಿತಿ ಬದಲಾಗಲು ಇನ್ನೂ ಸಾಕಷ್ಟು ಸಮಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ, ಕೆಲ ವಾರಗಳ ದತ್ತಾಂಶವನ್ನು ಪರಿಶೀಲಿಸಿದಾಗ, ವ್ಯಾಪಕವಾದ ರೋಗನಿರೋಧಕ ಶಕ್ತಿ ಮತ್ತು ಹಲವಾರು ರೂಪಾಂತರಿಗಳ ಸಂಯೋಜನೆಯು ಹಿಂದಿನ ರೂಪಾಂತರಿಗಳಿಗಿಂತ ಕಡಿಮೆ ತೀವ್ರತರವಾದ ರೋಗವನ್ನು ಉಂಟುಮಾಡುವ ವೈರಸ್ ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಒಮಿಕ್ರಾನ್ ರೂಪಾಂತರಿಯ ನಾಲ್ಕನೇ ಅಲೆಯ ಪ್ರಾಬಲ್ಯದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿ ಒಬ್ಬರಲ್ಲಿ ಡೆಲ್ಟಾ ಪ್ರಾಬಲ್ಯದ ಮೂರನೇ ಅಲೆಗಿಂತ ಶೇ. 73 ರಷ್ಟು ಕಡಿಮೆ ತೀವ್ರತೆ ರೋಗ ಇರುವುದು ಕಂಡುಬಂದಿದೆ. ಅದರಲ್ಲೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಮತ್ತು ಸೋಕಿನ ಸಂಖ್ಯೆಗಳನ್ನು ಬೇರ್ಪಡಿಸಿದಾಗ ಈ ಮೇಲಿನ ದತ್ತಾಂಶಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ ಎಂದು ಕೇಪ್ ಟೌನ್ ವಿಶ್ವವಿದ್ಯಾನಿಲಯದ ರೋಗನಿರೋಧಕ ತಜ್ಞ ವೆಂಡಿ ಬರ್ಗರ್ಸ್ ಹೇಳಿದ್ದಾರೆ.
ಇದಕ್ಕೂ ಮುನ್ನ ಒಮಿಕ್ರಾನ್ ಮೇಲೆ ಗಂಭೀರವಾದ ಎಚ್ಚರಿಕೆಯನ್ನು ನೀಡಲಾಗಿತ್ತು. ಅದಕ್ಕೆ ಕಾರಣ ಒಂದೇ ವೈರಾಣುವಿನಲ್ಲಿ ಹೆಚ್ಚು ರೂಪಾಂತರಿಗಳ ಸಂಯೋಜನೆ ಇರುವುದು. ಅವುಗಳಲ್ಲಿ ಹೆಚ್ಚಿನವು ಸ್ಪೈಕ್ ಪ್ರೋಟೀನ್ ಆಗಿದ್ದು, ಇದು ಕೋಶಗಳನ್ನು ಆಕ್ರಮಿಸಲು ಸಹಾಯ ಮಾಡುವ ಜವಾಬ್ದಾರಿಯನ್ನು ಹೊಂದಿರುವ ವೈರಸ್ನ ಪ್ರಮುಖ ಭಾಗವಾಗಿದೆ. ಈ ಮುಂಚಿನ ದತ್ತಾಂಶದ ಪ್ರಕಾರ ಲಸಿಕೆ ಪಡೆಯದವರಿಗೆ ಮಾತ್ರವಲ್ಲ, ಎರಡು ಡೋಸ್ ಲಸಿಕೆ ಪಡೆದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡವರ ಪ್ರತಿಕಾಯಗಳನ್ನು ಅಳಿಸಿಬಿಡುವ ಸಾಮರ್ಥ್ಯ ಒಮಿಕ್ರಾನ್ಗೆ ಇದೆ ಎಂದೇ ಹೇಳಲಾಗಿತ್ತು. ಆದರೆ ಒಮಿಕ್ರಾನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಪ್ರಶ್ನೆಯಾಗಿ ಉಳಿದಿತ್ತು. ಆದರೆ, ಅದರಲ್ಲಿರುವ ಹಲವಾರು ಅಂಶಗಳು ಓಮಿಕ್ರಾನ್ ರೂಪಾಂತರವು ಈ ಹಿಂದಿನ ಕರೊನಾ ಅಲೆಗಳಿಗಿಂತ ಕಡಿಮೆ ವೈರಸ್ ಅಥವಾ ತೀವ್ರತೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಕೋವಿಡ್ ಸೋಂಕುಗಳು ಸಾಮಾನ್ಯವಾಗಿ ಮೂಗಿನಲ್ಲಿ ಪ್ರಾರಂಭವಾಗುತ್ತವೆ ಮತ್ತು ಗಂಟಲಿನ ಕೆಳಗೆ ಹರಡುತ್ತವೆ. ಸೌಮ್ಯವಾದ ಸೋಂಕು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶಕ್ಕಿಂತ ಹೆಚ್ಚು ದೂರ ಹೋಗುವುದಿಲ್ಲ. ಆದರೆ, ವೈರಸ್ ಶ್ವಾಸಕೋಶವನ್ನು ತಲುಪಿದರೆ, ಅದು ಸಾಮಾನ್ಯವಾಗಿ ಹೆಚ್ಚು ತೀವ್ರವಾದ ರೋಗಲಕ್ಷಣಗಳು ಸಂಭವಿಸುತ್ತದೆ.
ಕಳೆದ ವಾರ ನಡೆದ ಐದು ಪ್ರತ್ಯೇಕ ಅಧ್ಯಯನಗಳ ಪ್ರಕಾರ, ಹಿಂದಿನ ರೂಪಾಂತರಿಗಳಂತೆ ಸುಲಭವಾಗಿ ಈ ಒಮಿಕ್ರಾನ್ ಶ್ವಾಸಕೋಸಕ್ಕೆ ತಗಲುವುದಿಲ್ಲ. ಜಪಾನೀಸ್ ಮತ್ತು ಅಮೇರಿಕನ್ ವಿಜ್ಞಾನಿಗಳ ದೊಡ್ಡ ಒಕ್ಕೂಟದಿಂದ ಆನ್ಲೈನ್ ಪೂರ್ವ-ಮುದ್ರಣವಾಗಿ ಬಿಡುಗಡೆ ಮಾಡಲ್ಪಟ್ಟಿರುವ ಒಂದು ಅಧ್ಯಯನದ ಪ್ರಕಾರ, ಓಮಿಕ್ರಾನ್ ಸೋಂಕು ತಗುಲಿದ ಹ್ಯಾಮ್ಸ್ಟರ್ಗಳು ಮತ್ತು ಇಲಿಗಳು ಕೂಡ ಕಡಿಮೆ ಶ್ವಾಸಕೋಶದ ಹಾನಿಯನ್ನು ಅನುಭವಿಸಿದವು ಮತ್ತು ಹಿಂದಿನ ರೂಪಾಂತರಿಗಳ ಸೋಂಕಿಗಿಂತ ಸಾಯುವ ಸಾಧ್ಯತೆ ಕಡಿಮೆ ಇದೆ. ಬೆಲ್ಜಿಯಂನ ಮತ್ತೊಂದು ಅಧ್ಯಯನ ಪ್ರಕಾರ ಅಲ್ಲಿಯೂ ಕೂಡ ಹ್ಯಾಮ್ಸ್ಟರ್ ಮೇಲೆ ಪರೀಕ್ಷೆ ನಡೆದಿದ್ದು, ಒಂದೇ ರೀತಿಯ ಫಲಿತಾಂಶ ಬಂದಿದೆ.
ಸಾಕಷ್ಟು ಅಧ್ಯಯನಗಳ ಪ್ರಕಾರ ಒಮಿಕ್ರಾನ್ ವೈರಸ್, ಕಡಿಮೆ ಸೋಂಕು ತೀವ್ರತೆಯನ್ನು ಹೊಂದಿದ್ದು, ಹೆಚ್ಚು ವೇಗವಾಗಿ ಹರಡುತ್ತದೆ. ದೇಹದ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ ಮಾತ್ರ ಒಮಿಕ್ರಾನ್ ವೈರಸ್ ಪುನರಾವರ್ತಿಸುತ್ತದೆ. ಹೀಗಾಗಿಯೇ ಇದು ಸುಲಭವಾಗಿ ಹರಡುತ್ತದೆ. ಶ್ವಾಸಕೋಸ ಮೇಲಿನ ಇದರ ದಾಳಿ ತೀವ್ರ ಕಡಿಮೆ ಆಗಿದೆ. ಪ್ರತಿಕಾಯಗಳ ದಾಳಿಯನ್ನು ತಪ್ಪಿಸುವಲ್ಲಿ ಓಮಿಕ್ರಾನ್ ಉತ್ತಮವಾಗಿದ್ದರೂ, ಇತ್ತೀಚಿನ ಅಧ್ಯಯನಗಳ ಪ್ರಕಾರ ಲಸಿಕೆಗಳು ಮತ್ತು ಮೊದಲಿನ ಸೋಂಕುಗಳ ಎರಡನೇ ಸಾಲಿನ ರಕ್ಷಣೆಯನ್ನು ತಪ್ಪಿಸುವಲ್ಲಿ ಒಮಿಕ್ರಾನ್ ಕಡಿಮೆ ಯಶಸ್ಸನ್ನು ಹೊಂದಿದೆ ಎಂದು ತೋರಿಸಿದೆ.
ಸೋಂಕಿನ ಸಂಖ್ಯೆಗಳು ದಾಖಲೆ ಹಂತ ತಲುಪುತ್ತಿರುವಾಗ, ಓಮಿಕ್ರಾನ್ನ ಹೆಚ್ಚಿನ ಪ್ರಸರಣ ಮತ್ತು ಸೌಮ್ಯ ಸೋಂಕಿನ ಸಂಯೋಜನೆಯು ಕರೊನಾ ಅಂತ್ಯದ ಆರಂಭವನ್ನು ಸೂಚಿಸಬಹುದು ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ರೋಗನಿರೋಧಕ ತಜ್ಞೆ ಮೋನಿಕಾ ಗಾಂಧಿ ಅವರು ಭಾವಿಸುತ್ತಾರೆ. ಅಲ್ಲದೆ, ಈ ರೂಪಾಂತರವು ಜನಸಂಖ್ಯೆಯಲ್ಲಿ ಆಳವಾದ ಪ್ರತಿರಕ್ಷೆಯನ್ನು ಸೃಷ್ಟಿಸುತ್ತದೆ ಮತ್ತು ಸಾಂಕ್ರಾಮಿಕ ರೋಗವನ್ನು ಆಶಾದಾಯಕವಾಗಿ ಕೊನೆಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆಂದು ಹೇಳಿದ್ದಾರೆ. (ಏಜೆನ್ಸೀಸ್)