ಗೌರಿಬಿದನೂರಿನ ಕಲ್ಯಾಣ ಮಂಟಪದಿಂದ ರಾತ್ರೋರಾತ್ರಿ ಪ್ರಿಯಕರನ ಜತೆ ವಧು ಎಸ್ಕೇಪ್! ಕಂಗಾಲಾದ ಕುಟುಂಬ

Vadhu Escae
Published on

ಚಿಕ್ಕಬಳ್ಳಾಪುರ: ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮದುವೆ ಮಂಟಪದಿಂದ ರಾತ್ರೋರಾತ್ರಿ ಪ್ರಿಯಕರನ ಜೊತೆ ವಧು ಪರಾರಿಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ಚನ್ನರಾಯಪ್ಪ ಕಲ್ಯಾಣ ಮಂಟದಪಲ್ಲಿ ನಡೆದಿದೆ.

ರಾತ್ರಿ ಖುಷಿ ಖುಷಿಯಾಗಿಯೇ ಆರತಕ್ಷತೆಯಲ್ಲಿ ಭಾಗಿಯಾಗಿದ್ದ ವಧು ರಾತ್ರೋರಾತ್ರಿ ಪ್ರಿಯಕರ ಜನತೆ ಎಸ್ಕೇಪ್​ ಆಗಿರುವುದು ಮದುವೆ ಮಂಟಪದಲ್ಲಿ ತಲ್ಲಣ ಸೃಷ್ಟಿಸಿದೆ. ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ ವಧು ವೆನ್ನಲ ಹಾಗೂ ಗೌರಿಬಿದನೂರಿನ ಕರೇಕಲ್ಲಹಳ್ಳಿಯ ವರ ಸುರೇಶ್ ನಡುವೆ ಮದುವೆ ನಿಶ್ಚಯವಾಗಿತ್ತು. ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ವಧು ಕೂಡ ನಗುತ್ತಲೇ ಎಲ್ಲ ಆಚರಣೆಯಲ್ಲಿ ಪಾಲ್ಗೊಂಡಿದ್ದಳು. ಆದರೆ, ರಾತ್ರೋರಾತ್ರಿ ಎಲ್ಲರಿಗೂ ದಿಢೀರ್​ ಶಾಕ್​ ನೀಡಿದ್ದಾಳೆ.

ಬಹು ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರಿಯಕರ ಪ್ರವೀಣ್ ಜೊತೆ ವಧು ವೆನ್ನಲ ಪರಾರಿಯಾಗಿದ್ದಾಳೆ. ಪ್ರಿಯಕರ ಪ್ರವೀಣ್ ಗುಡಿಬಂಡೆ ತಾಲೂಕಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ನಿವಾಸಿ. ಇಂದು ಬೆಳಿಗ್ಗೆ 9.30ಕ್ಕೆ ಮಾಂಗಲ್ಯ ಧಾರಣೆ ನಡೆಯಬೇಕಿತ್ತು. ಅಷ್ಟರಲ್ಲಿ ವಧು ಮಾಡಿರುವ ಕೆಲಸದಿಂದಾಗಿ ಎರಡು ಕುಟುಂಬಗಳು ಪೊಲೀಸ್​ ಠಾಣೆಯ ಮೆಟ್ಟಿಲೇರಿವೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಧುವಿನ ಸಂಬಂಧಿಗಳು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಮಗಳು ಮಾಡಿದ ಕೆಲಸಕ್ಕೆ ವಧುವಿನ ಕುಟುಂಬ ವರನ ಕುಟುಂಬದ ಜತೆಗೆ ತಲೆತಗ್ಗಿಸುವಂತಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net