ತಂದೆ ಮಾತಿಗೆ ನೊಂದು ರೈಲಿನಡಿ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕನ ರಕ್ಷಣೆ..!

Student
Published on

ಬೆಂಗಳೂರು: ಹೆಚ್ಚಿನ ಅಂಕ ಗಳಿಸಿಲ್ಲ ಅಂತಾ ತಂದೆ ಬೈದಿದ್ದಕ್ಕೆ ಕೋಪದಿಂದ ಮನೆಬಿಟ್ಟು, ರೈಲಿನ ಅಡಿಯಲ್ಲಿ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕನನ್ನು ಆರ್​ಪಿಎಫ್​​ ತಂಡ ಮತ್ತು ಮಕ್ಕಳ ಕಳ್ಳಸಾಗಣೆ ವಿರೋಧಿ ತಂಡ ರಕ್ಷಿಸಿದೆ.

ಬೆಂಗಳೂರಿನ ಮಹಾದೇವಪುರದಲ್ಲಿ ಈ ಘಟನೆ ನಡೆದಿದೆ. ಇದೇ ಅಕ್ಟೋಬರ್ 23ರ ಮಧ್ಯಾಹ್ನ 4.30ಕ್ಕೆ 16 ವರ್ಷದ ಬಾಲಕ ಮನೆ ಬಿಟ್ಟಿದ್ದ. ಮಹದೇವಪುರದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ರಾತ್ರಿ 7 ಗಂಟೆಗೆ ಹೊರಡುವ ಕೆಕೆ‌ ಎಕ್ಸ್​ಪ್ರೆಸ್ ರೈಲಿನಡಿ ಬಾಲಕ ಮಲಗಿದ್ದ. ಟ್ರೈನ್ ಅಡಿಯಿಂದಲೇ ಸೆಲ್ಫಿ ವಿಡಿಯೋ ಮಾಡಿ, ಅದನ್ನು ಅಂಕಲ್​ಗೆ ಕಳುಹಿಸಿದ್ದ. ತಂದೆ ಬೈಯಬಾರದಿತ್ತು ಎಂದು ಕಣ್ಣೀರಾಕುತ್ತಾ ವಿಡಿಯೋದಲ್ಲಿ ಬಾಲಕ ಹೇಳಿದ್ದ.

ಇನ್ನು ವಿಡಿಯೋದಲ್ಲಿ ಟ್ರೈನ್ ಅನೌನ್ಸ್​ಮೆಂಟ್ ಕೂಡ ರೆಕಾರ್ಡ್ ಆಗಿತ್ತು. ಕೆಎಸ್​ಆರ್ ರೈಲ್ವೆ ನಿಲ್ದಾಣದ ಬಗ್ಗೆ ಅನೌನ್ಸ್​ಮೆಂಟ್ ಆಗಿದ್ದನ್ನು ಕೇಳಿ ಕೂಡಲೇ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಾಲಕನ ಪೋಷಕರು ಆಗಮಿಸಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಆರ್​ಪಿಎಫ್​​ ತಂಡ ಮತ್ತು ಮಕ್ಕಳ ಕಳ್ಳಸಾಗಣೆ ವಿರೋಧಿ ತಂಡ ಕಾರ್ಯಚರಣೆ ನಡೆಸಿದಾಗ ಬಾಲಕ ಕೆಕೆ ಎಕ್ಸ್​ಪ್ರೆಸ್ ಟ್ರೈನ್ ಅಡಿ ಇರುವುದು ಪತ್ತೆ ಆಯಿತು.

ಕೊನೆಗೆ ಬಾಲಕನನ್ನು ರಕ್ಷಿಸಿದ ಆರ್​ಪಿಎಫ್​ ಟೀಂ, ಆತನಿಗೆ ಮತ್ತು ಪಾಲಕರಿಗೆ ಬುದ್ಧಿವಾದ ಹೇಳಿ, ಪೋಷಕರಿಗೆ ಒಪ್ಪಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net