ಗ್ರ್ಯಾಂಡ್​ ಫಿನಾಲೆಗೂ ಮುನ್ನ ಶಾಕಿಂಗ್​ ನ್ಯೂಸ್​ ಕೊಟ್ಟ ಬಿಗ್​ಬಾಸ್ ಡೈರೆಕ್ಟರ್​: ಶೋ ಇತಿಹಾಸದಲ್ಲೇ ಇದು ಮೊದಲು!

BBK
Published on

ಬೆಂಗಳೂರು: ಕನ್ನಡದ ಅತಿದೊಡ್ಡ ಹಾಗೂ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ ತನ್ನ 8ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ಬಂದಿದೆ. ಇನ್ನೂ ಒಂದು ವಾರದಲ್ಲಿ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಯಾವುದೇ ಭಾಷೆಯ ಬಿಗ್​ಬಾಸ್​ ಶೋನಲ್ಲಿ ವೀಕ್ಷಕರು ಎದುರು ನೋಡುವಂತಹ ಪ್ರಮುಖ ಎಪಿಸೋಡ್​ ಅಂದ್ರೆ ಅದು ಫ್ಯಾಮಿಲಿ ರೌಂಡ್​. ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಗಳ ಕುಟುಂಬಸ್ಥರು ಪ್ರವೇಶ ನೀಡುವ ಎಪಿಸೋಡ್​ ತುಂಬಾ ಭಾವನಾತ್ಮಕವಾಗಿರುತ್ತದೆ.

ಇದುವರೆಗೂ ನಡೆದ ಫ್ಯಾಮಿಲಿ ಸುತ್ತಿನಲ್ಲಿ ಆಯಾ ಸ್ಪರ್ಧಿಗಳ ಕುಟುಂಬಸ್ಥರು ಮನೆಯೊಳಗೆ ಎಂಟ್ರಿ ನೀಡಿದಾಗ ಆಯಾ ಸ್ಪರ್ಧಿಗಳಿಗೆ ಫ್ರೀಜ್​ ಟಾಸ್ಕ್​ ಕೊಡಲಾಗುತ್ತಿತ್ತು. ಅಂದ್ರೆ, ನಿಂತಿದ್ದ ಅಥವಾ ಕೂತಿದ್ದ ಸ್ಥಳದಲ್ಲಿ ನಿರ್ಜೀವ ಪ್ರತಿಮೆಯಂತೆ ಇರುವುದು. ಒಂದು ಮಾತನ್ನು ಆಡುವಂತಿರಲಿಲ್ಲ. ಬಂದ ಕುಟುಂಬಸ್ಥರು ಬೇರೆಯವರ ಜತೆ ಹೆಚ್ಚು ಮಾತನಾಡುತ್ತಿದ್ದರು. ಕೊನೆಯಲ್ಲಿ ಮನೆಯಿಂದ ಹೋಗುವ ಸಮಯದಲ್ಲಿ ಮಾತ್ರ ಸ್ಪರ್ಧಿಗಳಿಗೆ ತಮ್ಮ ಕುಟುಂಬದ ಜತೆ ಮಾತನಾಡಲು ಅವಕಾಶ ನೀಡಲಾಗುತ್ತಿತ್ತು. ಈ ಹಿಂದೆ ಫ್ಯಾಮಿಲಿ ರೌಂಡ್​ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿವೆ.

ಆದರೆ, ಈ ಬಾರಿ ಶಾಕಿಂಗ್​ ನ್ಯೂಸ್​ ಒಂದು ಹೊರಬಿದ್ದಿದೆ. ಶೋ ನಿರ್ದೇಶಕ ಜಯದೇವ್​ ಕಪ್ಪಣ್ಣ ಸಂದರ್ಶನವೊಂದರಲ್ಲಿ ಗ್ರ್ಯಾಂಡ್​ ಫಿನಾಲೆ ಈವೆಂಟ್​ ತಯಾರಿ ಕುರಿತು ಮಾತನಾಡುವಾಗ ಭಾವುಕತೆಯನ್ನು ಹೊರಹಾಕಿದ್ದಾರೆ. ಅಂದರೆ, ಈ ಬಾರಿ ಫ್ಯಾಮಿಲಿ ರೌಂಡ್​ ನಡೆಸದೇ ಇರುವುದು ಬಹಳ ಬೇಸರವಾಗಿದೆ ಎಂದು ತಿಳಿಸಿದ್ದಾರೆ. ಕರೊನಾ ವೈರಸ್​ ಶಿಷ್ಟಾಚಾರ ಪಾಲಿಸಬೇಕಾಗಿರುವುದರಿಂದ ಫ್ಯಾಮಿಲಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಫೈನಲ್​ ಎಪಿಸೋಡ್​ ಅನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೆವು. ಅನೇಕ ಜನರು ಮನೆಯೊಳಗೆ ಹೋಗುತ್ತಿದ್ದರು. ಆದರೆ, ಈ ಬಾರಿ ಸಾಂಕ್ರಮಿಕ ನಿರ್ಬಂಧಗಳು ಇರುವುದರಿಂದ ಸ್ಪರ್ಧಿಗಳ ಕುಟುಂಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಾಧ್ಯವಿಲ್ಲ. ಬಿಗ್​ಬಾಸ್​ ರಿಯಾಲಿಟಿ ಶೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫ್ಯಾಮಿಲಿ ರೌಂಡ್​ ನಡೆಸಲಾಗುತ್ತಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net