50 ಲಕ್ಷ ನಗದು, 1 ಕೆಜಿ ಚಿನ್ನ, ಅರ್ಧ ಕೆಜಿ ಬೆಳ್ಳಿ ಕೊಟ್ಟು ಅದ್ಧೂರಿ ಮದ್ವೆಯಾದ ವೈದ್ಯೆಗೆ ಎರಡೇ ತಿಂಗಳಲ್ಲಿ ಬಿಗ್​ ಶಾಕ್​!

Ballari Cheating Case
Published on

ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ವರದಕ್ಷಿಣೆ ವಂಚನೆ ಪ್ರಕರಣವೊಂದು ಬಯಲಿಗೆ ಬಂದಿದೆ. ಹೈದರಾಬಾದ್​ ಮೂಲದ ವೈದ್ಯೆಗೆ ಮೋಸ ಮಾಡಿ ಮದುವೆಯಾದ ಬಳ್ಳಾರಿ ಮೂಲದ ಇಂಜಿನಿಯರ್​, ಇದೀಗ ಮತ್ತೊಂದು ಮದುವೆ ಆಗುವ ಮೂಲಕ ವೈದ್ಯೆಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಹೈದರಾಬಾದ್​ ಮೂಲದ ವೈದ್ಯೆ ಮೌನಿಕಾ ಅವರು ‌ಬಳ್ಳಾರಿ ಮೂಲದ ಇಂಜಿನಿಯರ್ ರಘುರಾಮ ರೆಡ್ಡಿ ಜೊತೆ 2019ರಲ್ಲಿ ಮದುವೆ ಆಗಿದ್ದರು. ಆಸ್ಟ್ರೇಲಿಯಾದಲ್ಲಿ ‌ಕೆಲಸ ಮಾಡುತ್ತಿರುದಾಗಿ ಸುಳ್ಳು ಹೇಳಿ 50 ಲಕ್ಷ ನಗದು, ಒಂದು ಕೆಜಿ ಬಂಗಾರ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ರುಘುರಾಮ್​ ವರದಕ್ಷಿಣೆ ಪಡೆದುಕೊಂಡಿದ್ದ. ಮದುವೆ ಆಗಿ ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ಹಣಕ್ಕಾಗಿ ಹೆಂಡ್ತಿಗೆ ಕಿರುಕುಳ ನೀಡಲು ಆರಂಭಿಸಿದ.

ಯಾವುದೇ ಕೆಲಸವಿಲ್ಲದೇ ಮನೆಯಲ್ಲೇ ಇದ್ದ ಆತ ನಿತ್ಯ ಹಣಕ್ಕಾಗಿ ವೈದ್ಯೆಯನ್ನು ಪೀಡಿಸುತ್ತಿದ್ದ. ಅಷ್ಟೊಂದು ವರದಕ್ಷಿಣೆ ನೀಡಿದರೂ ಆತನ ಧನದಾಹ ತೀರಿರಲಿಲ್ಲ. ಹೀಗಾಗಿ ನಿತ್ಯವೂ ಮೋನಿಕಾಗೆ ನರಕ ತೋರಿಸುತ್ತಿದ್ದ. ಆತನ ಕುಟುಂಬವು ಇದಕ್ಕೆ ಕುಮ್ಮಕ್ಕು ನೀಡಿತ್ತು. ರಘುರಾಮನ ಕಾಟ ಸಹಿಸಲಾರದೆ ಮೋನಿಕಾ ಮನೆಯಿಂದ ಹೊರ ಬಂದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು ಆತನಾಗಲಿ ಅಥವಾ ಕುಟುಬಂಸ್ಥರಾಗಲಿ ತಲೆ ಕೆಡಿಸಿಕೊಂಡಿರಲಿಲ್ಲ

ಮೋನಿಕಾ ಮನೆ ಬಿಟ್ಟು ಬಂದಿದ್ದನ್ನೇ ಲಾಭ ಮಾಡಿಕೊಂಡ ರಘುರಾಮ ಈಗ ಮತ್ತೊಂದು ಮದುವೆಯಾಗಿದ್ದಾನೆ. ಎರಡನೇ ಮದುವೆ ವಿಷಯ ಗೊತ್ತಾಗಿ, ರಘುರಾಮನ ಮನೆಗೆ ವೈದ್ಯೆ ಹಾಗೂ ಕುಟುಂಬಸ್ಥರು ಹೋದಾಗ ಅವರ ಮೇಲೆ ಆತ ಮತ್ತು ಆತನ ಕುಟುಂಬ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ವೈದ್ಯೆ ಹಾಗೂ ಕುಟುಂಬಸ್ಥರಿಗೆ ಮುಖ, ಕೈ-ಕಾಲುಗಳಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.

ಇದೀಗ ವೈದ್ಯೆ ನೀಡಿದ ದೂರಿನನ್ವಯ ಮೌನಿಕಾ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ ಹಾಗೂ ಸಹೋದರ ಹರೀಶ್ ರೆಡ್ಡಿಯನ್ನು ಬಂಧಿಸಲಾಗಿದೆ. ಈ ಮೂವರು ಸೇರಿದಂತೆ ಕುಟುಂಬದ ಏಳು ಜನರ ಮೇಲೆ ದೂರು ದಾಖಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಮತ್ತು ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net