ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿಗೆ 60ಕ್ಕೂ ಹೆಚ್ಚು ಬಲಿ: ತಾಲಿಬಾನ್​ ಬಳಿಕ ಐಸಿಸ್ ಅಟ್ಟಹಾಸ​

God Punish
Published on

ಕಾಬುಲ್​​: ತಾಲಿಬಾನಿಗಳು ವಶಪಡಿಸಿಕೊಂಡಾಗಿನಿಂದ ಶಾಂತಿ ನೆಲೆಸಿದ್ದ ಆಫ್ಘಾನ್​ ನಾಡು ಸಾವಿನ ಮನೆಯಾಗಿದೆ. ನಿತ್ಯ ಮದ್ದು-ಗುಂಡುಗಳ ಆರ್ಭಟದಿಂದ ಜನರು ಮೃತ್ಯುವಿನ ನಡುವೆಯೇ ಜೀವಿಸುವಂತಾಗಿದೆ. ಇದರ ನಡುವೆ ತಾಲಿಬಾನ್​ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ದೇಶ ತೊರೆಯಲು ಕಾಬುಲ್​ ವಿಮಾನ ನಿಲ್ದಾಣದಲ್ಲಿ ಜನ ಕಿಕ್ಕಿರಿದು ಸೇರಿದ್ದು, ಇದನ್ನೇ ದಾಳವಾಗಿ ಮಾಡಿಕೊಂಡು ಐಸಿಸ್​ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದಾರೆ. ನಿನ್ನೆ (ಆಗಸ್ಟ್​ 26) ರಾತ್ರಿ ನಡೆದ ಭೀಕರ ಸ್ಫೋಟದಲ್ಲಿ 13 ಅಮೆರಿಕ ಯೋಧರು ಹಾಗೂ 60 ನಾಗರಿಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ 150 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ಕಾಬುಲ್​ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಫ್ಘಾನ್​ ಪತ್ರಕರ್ತರು ಸೆರೆಹಿಡಿದಿರುವ ವಿಡಿಯೋದಲ್ಲಿ ಡಜನ್​ಗಟ್ಟಲೆ ಮೃತದೇಹಗಳು ಕಾಬುಲ್​ ಏರ್​ಪೋರ್ಟ್​ ಅಂಚಿನಲ್ಲಿರುವ ಕಾಲುವೆಯ ಸುತ್ತಮುತ್ತ ಬಿದ್ದಿವೆ. ಅವಳಿ ಸ್ಫೋಟದ ಬೆನ್ನಲ್ಲೇ ಮೂರನೇ ಸ್ಫೋಟವು ಕೂಡ ಏರ್​ಪೋರ್ಟ್​ನಲ್ಲಿ ಐಸಿಸ್​ ಉಗ್ರರು ನಡೆಸಿದ್ದಾರೆ.

ದಾಳಿಯ ಹೊಣೆಯನ್ನು ಐಸಿಸ್​ ಹೊತ್ತುಕೊಂಡಿದೆ. ಅಮರಿಕ ಸೇನೆಯ ಜತೆಗಿದ್ದ ಅನುವಾದಕರು ಮತ್ತು ಸಹಯೋಗಿಗಳೇ ನಮ್ಮ ಆತ್ಮಾಹುತಿ ಬಾಂಬ್​ ದಾಳಿಕೋರರ ಗುರಿಯಾಗಿದ್ದರು ಎಂದು ಹೇಳಿಕೊಂಡಿದೆ. ಅಮೆರಿಕ ಕೂಡ ದಾಳಿ ಕುರಿತು ಐಸಿಸ್​ ಮೇಲೆ ದೂಷಿಸಿದೆ.

ಸ್ಫೋಟದಲ್ಲಿ ಅಮೆರಿಕದ 13 ಯೋಧರು ಬಲಿಯಾಗಿದ್ದಾರೆ. 2011 ಆಗಸ್ಟ್​ನಲ್ಲಿ 30 ಯೋಧರಿದ್ದ ಅಮೆರಿಕ ಹೆಲಿಕಾಪ್ಟರ್​ ಅನ್ನು ಹೊಡೆದುರುಳಿಸಿದ ಬಳಿಕ ಒಂದೇ ಘಟನೆಯಲ್ಲಿ ಅತಿ ಹೆಚ್ಚು ಅಮೆರಿಕ ಯೋಧರು ಮೃತಪಟ್ಟ ಘಟನೆ ಇದಾಗಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಸೇನಾ ಪಡೆಗಳು ಆಫ್ಘಾನ್​ ಪ್ರಜೆಗಳನ್ನು ಸ್ಥಳಾಂತರ ಮಾಡುವ ಕಾರ್ಯದ ನಡುವೆಯೇ ಈ ಅಮಾನುಷ ದಾಳಿ ನಡೆದಿದೆ.

ಕಾಬುಲ್​ ಏರ್​ಪೋರ್ಟ್​ ಜನ ತುಂಬಿದ್ದ ಗೇಟ್​ ಬಳಿ ತಮ್ಮ ಸಂಘಟನೆಯ ಆತ್ಮಾಹುತಿ ಬಾಂಬ್​ ದಾಳಿಕೋರ ಇರುವ ಚಿತ್ರವನ್ನು ಸಹ ಐಸಿಸ್​ ಬಿಡುಗಡೆ ಮಾಡಿದೆ. ಈ ಘಟನೆಯಿಂದಾಗಿ ದೇಶ ತೊರೆಯಲು ಹವಣಿಸುತ್ತಿದ್ದ ಆಫ್ಘಾನ್​ ಜನರ ಸ್ಥಳಾಂತರ ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಮೊದಲ ಸ್ಫೋಟ ವರದಿಯಾದ ತಕ್ಷಣ, ಪೆಂಟಗನ್ ಒಂದು ಹೇಳಿಕೆಯನ್ನು ನೀಡಿತು. ಅಬ್ಬೆ ಗೇಟ್‌ನಲ್ಲಿ ನಡೆದ ಸ್ಫೋಟವು ಒಂದು ಸಂಕೀರ್ಣ ದಾಳಿಯ ಪರಿಣಾಮವಾಗಿದೆ ಎಂದು ದೃಢೀಕರಿಸಬಹುದು. ಅಬ್ಬೆ ಗೇಟ್‌ನಿಂದ ಸ್ವಲ್ಪ ದೂರದಲ್ಲಿರುವ ಬ್ಯಾರನ್ ಹೋಟೆಲ್‌ನಲ್ಲಿ ಅಥವಾ ಸಮೀಪ ಇನ್ನೊಂದು ಸ್ಫೋಟವನ್ನು ಖಚಿತಪಡಿಸಿಕೊಳ್ಳಬಹುದು. ನಾವು ಅಪ್‌ಡೇಟ್ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿತು.

ತಾಲಿಬಾನ್ ಆಕ್ರಮಣದ ನಂತರ ದೇಶವನ್ನು ತೊರೆಯಲು ಹವಣಿಸುತ್ತಿರುವ ಸಾವಿರಾರು ಆಫ್ಘನ್ನರ ಹತಾಶೆಯ ಕೂಗುಗಳ ಪ್ರತಿಧ್ವನಿಗಳಿಂದ ಈಗಾಗಲೇ ತುಂಬಿಹೋಗಿರುವ ವಿಮಾನ ನಿಲ್ದಾಣದಲ್ಲಿ ನಿನ್ನೆ ನಡೆದ ಅವಳಿ ಸ್ಫೋಟಗಳ ನಂತರ ಇನ್ನಷ್ಟು ಹೃದಯ ವಿದ್ರಾವಕ ದೃಶ್ಯಗಳಿಗೆ ಸಾಕ್ಷಿಯಾಗಿದೆ.

ಕಾಬೂಲ್ ವಿಮಾನ ನಿಲ್ದಾಣದ ಬಳಿಯಿದ್ದ 'ಬರಾನ್ ಕ್ಯಾಂಪ್' ನಲ್ಲಿ ಅಮೆರಿಕದ ಸೇನೆಯೊಂದಿಗೆ ಭಾಷಾಂತರಕಾರರು ಮತ್ತು ಸಹಯೋಗಿಗಳಿದ್ದ ದೊಡ್ಡ ಕೂಟವನ್ನು ತಲುಪುವಲ್ಲಿ ಮೊದಲಿಗೆ ಯಶಸ್ವಿಯಾದ ಐಸಿಸ್​ ಆತ್ಮಾಹುತಿ ಬಾಂಬರ್, ನಂತರ ತನ್ನ ಸ್ಫೋಟಕ ಬೆಲ್ಟ್ ಅನ್ನು ಸ್ಫೋಟಿಸಿದ್ದಾನೆ. ಇದರ ಪರಿಣಾಮ ಸುಮಾರು 72 ಜನರು ಮೃತಪಟ್ಟು 143 ಕ್ಕೂ ಹೆಚ್ಚು ಜನರನ್ನು ಗಾಯಗೊಂಡಿದ್ದಾರೆ. ಇದರಲ್ಲಿ ತಾಲಿಬಾನ್ ಉಗ್ರರು ಕೂಡ ಸೇರಿಕೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net