ಅಶ್ಲೀಲ ವೆಬ್​ಸೈಟ್​ ಓನ್ಲಿಫ್ಯಾನ್ಸ್​ನ ಸಿಇಒ ಆಗಿ ಮುಂಬೈ ಮೂಲದ ಅಮ್ರಪಲಿ ಗ್ಯಾನ್​ ನೇಮಕ!

Amrapali gan
Published on

ನವದೆಹಲಿ: ಓನ್ಲಿ ಫ್ಯಾನ್ಸ್​ ಕಂಪನಿಯು ತನ್ನ ನೂತನ ಸಿಇಒ ಹುದ್ದೆಗೆ ಭಾರತೀಯ ಮೂಲದ ಅಮ್ರಪಲಿ ಗ್ಯಾನ್ ಅವರನ್ನು ಆಯ್ಕೆ ಮಾಡಿದೆ. ಕಂಪನಿಯ ಸಂಸ್ಥಾಪಕ ಟೀಮ್​ ಸ್ಟೋಕ್ಲಿ ಅವರು ತಮ್ಮ ಇತರೆ ಪಯತ್ನವನ್ನು ಮುಂದುವರಿಸಲು ಕಂಪನಿ ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಮುಂಬೈ ಮೂಲದ ಅಮ್ರಪಲಿ ಗ್ಯಾನ್​ ಅವರನ್ನು ಆಯ್ಕೆ ಮಾಡಲಾಗಿದೆ. ಅಮ್ರಪಲಿ ಘೋಷಣೆ ಮಾಡಿದಾಗಿನಿಂದ ಆಕೆ ಯಾರು? ಅವರ ಹಿನ್ನೆಲೆ ಏನು? ಮತ್ತು ಭಾರತಕ್ಕೂ ಅವರಿಗೂ ಇರುವ ಸಂಬಂಧ ಏನು? ಮುಂತಾದ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿವೆ.

ಅಮ್ರಪಲಿ ಅವರ ಈ ಹೊಸ ಪಾತ್ರದೊಂದಿಗೆ ವಿದೇಶಿ ಕಂಪನಿಗಳಲ್ಲಿ ಸಿಇಒ ಸ್ಥಾನವನ್ನು ಅಲಂಕರಿಸಿರುವ ಭಾರತೀಯ ದೀರ್ಘ ಪಟ್ಟಿಗೆ ಅವರು ಕೂಡ ಸೇರಿಕೊಂಡಿದ್ದಾರೆ. ಸುಂದರ್​ ಪಿಚೈ, ಸತ್ಯ ನಾದೆಲ್ಲ, ಇಂದ್ರಾ ನೂಯಿ, ಅರವಿಂದ್​ ಕೃಷ್ಣ ಮತ್ತು ಇತ್ತೀಚೆಗಷ್ಟೇ ಟ್ವಿಟರ್​ ಸಿಇಒ ಆಗಿ ನೇಮಕವಾದ ಪರಾಗ್​ ಅಗರವಾಲ್​ ಸಾಲಿಗೆ ಇದೀಗ ಅಮ್ರಪಲಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿದೇಶಿ ಕಂಪನಿಗಳಲ್ಲಿ ಬಹುತೇಕ ಭಾರತೀಯರದ್ದೇ ದರ್ಬಾರ್​ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಅದರಲ್ಲೂ ಓನ್ಲಿ ಫ್ಯಾನ್ಸ್​ ಕಂಪನಿಗೆ ಓರ್ವ ಮಹಿಳೆಗೆ ಅಮ್ರಪಲಿ ಆಯ್ಕೆ ಆಗಿರುವುದು ಹೊಸ ಅಲೆಗೆ ನಾಂದಿ ಆಡಿದಂತಾಗಿದೆ. ಏಕೆಂದರೆ ಓನ್ಲಿ ಫ್ಯಾನ್ಸ್​ ಒಂದು ಸಾಮಾನ್ಯ ಕಂಪನಿಯಲ್ಲ. ಅದೊಂದು ಅಶ್ಲೀಲ ಜಾಲತಾಣ ಎಂಬುದು ಗಮನಾರ್ಹ ವಿಚಾರವಾಗಿದೆ. ಓನ್ಲಿ ಫ್ಯಾನ್ಸ್​ ಎಂಬುದು ಚಂದಾದಾರ ಆಧಾರಿತ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಖರೀದಿಸುವ ಜಾಲತಾಣ ವೇದಿಕೆಯಾಗಿದ್ದು, ಇದನ್ನು 2016ರಲ್ಲಿ ಲಾಂಚ್​ ಮಾಡಲಾಯಿತು. ಅದೇ ಕಂಪನಿಗೆ ಓರ್ವ ಭಾರತೀಯಳು ಆಯ್ಕೆ ಆಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ. ಹಾಗಾದ್ರೆ ಅಮ್ರಪಲಿ ಯಾರು ಎಂಬುದನ್ನು ಮುಂದೆ ತಿಳಿಯೋಣ...

ಯಾರೀ ಅಮ್ರಪಲಿ ಗ್ಯಾನ್​?

ಓನ್ಲಿ ಫ್ಯಾನ್ಸ್​ನ ನೂತನ ಸಿಇಒ ಆಗಿ ನೇಮಕವಾದ ಅಮ್ರಪಲಿ ಗ್ಯಾನ್​ ಮುಂಬೈ ಮೂಲದವರು. ಇದನ್ನು ಹೊರತುಪಡಿಸಿದರೆ, ಗ್ಯಾನ್ ಅವರ ವೈಯಕ್ತಿಕ ದಾಖಲೆಗಳಲ್ಲಿ ದೇಶದ ಬಗ್ಗೆ ಕಡಿಮೆ ಉಲ್ಲೇಖವಿದೆ. ಆಕೆಯ ಆರಂಭಿಕ ಮತ್ತು ಉನ್ನತ ಶಿಕ್ಷಣವು ಯುಎಸ್​ನ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಮತ್ತು ಅದು ಅವರ ಖಾಯಂ ನಿವಾಸವೂ ಆಗಿದೆ. ಹೀಗಾಗಿ ಆಕೆ ಭಾರತದವಳಾದರೂ ತವರಿನ ಸಂಪರ್ಕ ಕಡಿಮೆ ಇದೆ. ಅಮ್ರಪಲಿ ಮೂರು ಪದವಿಗಳನ್ನು ಪಡೆದಿದ್ದಾರೆ. ಎಫ್​ಐಡಿಎಂನಿಂದ ಮರ್ಚಂಡೈಸ್ ಮಾರ್ಕೆಟಿಂಗ್‌ನಲ್ಲಿ ಅಸೋಸಿಯೇಟ್ ಆಫ್ ಆರ್ಟ್ಸ್ ಪದವಿ, ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪಿಆರ್​ ಮತ್ತು ಸಾಂಸ್ಥಿಕ ಸಂವಹನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಆನ್‌ಲೈನ್‌ನಿಂದ ಉದ್ಯಮಶೀಲತೆಯ ಪ್ರಮಾಣಪತ್ರವನ್ನು ಪಡೆದಿದ್ದಾರೆ.

ಅಮ್ರಪಲಿಗೆ ಪ್ರಸ್ತುತ 36 ವರ್ಷ ವಯಸ್ಸು ಮತ್ತು ಅವಿವಾಹಿತ ಮಹಿಳೆ. ಓನ್ಲಿ ಫ್ಯಾನ್​ ಸಿಇಒ ಮಾತ್ರವಲ್ಲದೆ, ಕಳೆದ ನಾಲ್ಕು ವರ್ಷಗಳಲ್ಲಿ ಆರ್ಕೆಡ್​ ಏಜೆನ್ಸಿಗೆ ಸಮಾಲೋಚಕರಾಗಿಯೋ ಕೆಲಸ ಮಾಡಿದ್ದಾರೆಂಬುದು ಅವರ ಲಿಂಕ್​ಡಿನ್​ ಪ್ರೊಫೈಲ್​ ಹೇಳುತ್ತಿದೆ. ಸಿಇಒ ಆಗಿ ಆಯ್ಕೆ ಆಗುವ ಮೊದಲ ಓನ್ಲಿ ಫ್ಯಾನ್ಸ್​ ಕಂಪನಿಯಲ್ಲಿ ಮಾರ್ಕೆಟಿಂಗ್ ಮತ್ತು ಸಂವಹನ ಅಧಿಕಾರಿಯಾಗಿ 2020ರಿಂದಲೂ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಯುಎಸ್​ನ ಕನ್ನಾಬಿಸ್​ ರೆಸ್ಟೋರೆಂಟ್​ನ ಕೆನ್ನಾಬಿಸ್​ ಕೆಫೆಯಲ್ಲಿ ಮಾರ್ಕೆಟಿಂಗ್​ ಮತ್ತು ಪಬ್ಲಿಷಿಟಿಯ ಉಪಾಧ್ಯಕ್ಷರಾಗಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಲೋವೆಲ್ ಹರ್ಬ್ ಕಂಪನಿಯಲ್ಲಿ ಸಂವಹನ ನಿರ್ದೇಶಕರಾಗಿ ಒಂದು ವರ್ಷಕ್ಕಿಂತ ಕಡಿಮೆ ಕಾಲ ಕೆಲಸ ಮಾಡಿದ್ದಾರೆ. ರೆಡ್​ ಬುಲ್​ ಮೀಡಿಯಾ ಹೌಸ್​ನಲ್ಲಿ ಬ್ರ್ಯಾಂಡ್​ ಆ್ಯಕ್ಟಿವೇಶನ್​ ಮತ್ತು ಕಮ್ಯುನಿಕೇಷನ್​ ಮ್ಯಾನೇಜರ್​ ಆಗಿ ಸುಮಾರು 2 ವರ್ಷ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಕೆಲವು ಸ್ಟಾರ್ಟಪ್ಸ್​ ಕಂಪನಿಗಳಲ್ಲಿ 2008 ರಿಂದ 2016ರವರೆಗೆ ಮಾರ್ಕೆಟಿಂಗ್​ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ಅಮ್ರಪಲಿ ಕೂಡ ಓನ್ಲಿ ಫ್ಯಾನ್ಸ್​ ಅಕೌಂಟ್​ ಹೊಂದಿದ್ದು, ಅದರಲ್ಲಿ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಈ ಖಾತೆ ಹೆಚ್ಚು ಸಕ್ರೀಯವಾಗಿರುವಂತೆ ಕಾಣುತ್ತಿಲ್ಲ. ಇನ್ನು ತಮ್ಮ ಸಂಬಳ ಅಥವಾ ಇನ್ನಿತರ ಮಾಹಿತಿಗಳನ್ನು ಅಮ್ರಪಲಿ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಓನ್ಲಿ ಫ್ಯಾನ್​ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net