

ಕೋಲ್ಕತ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಅವರ ಆಪ್ತೆ ಹಾಗೂ ನಟಿ ಅರ್ಪಿತಾ ಮುಖರ್ಜಿ ಮನೆಯಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಇದೀಗ ಅರ್ಪಿತಾಗೆ ಸಂಬಂಧಿಸಿದ ಮತ್ತೊಂದು ಫ್ಲ್ಯಾಟ್ನಲ್ಲಿ ಮತ್ತೆ 20 ಕೋಟಿ ರೂಪಾಯಿ ನಗದು ದೊರೆತಿದೆ.
ನಗದು ಹಣ ಮಾತ್ರವಲ್ಲದೆ 2 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನ ಸಹ ಪತ್ತೆಯಾಗಿದೆ. ಈಗಲೂ ಹಣ ಎಣಿಕೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಕಳೆದ ವಾರ ಅರ್ಪಿತಾ ಮನೆಯಲ್ಲಿ 21 ಕೋಟಿ ರೂಪಾಯಿ ಪತ್ತೆಯಾಗಿತ್ತು. ಬಂಗಾಳದಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಸಚಿವ ಪಾರ್ಥ ಚಟರ್ಜಿಯ ನಿಕಟವರ್ತಿ ಅರ್ಪಿತಾ ಮನೆಯ ಮೇಲೆ ದಾಳಿ ನಡೆಸಿದೆ. ಈವರೆಗೂ ಸುಮಾರು 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದ್ದು, ಹಗರಣದ ಫಲ ಎಂದು ಹೇಳಲಾಗಿದೆ.
ಏನೇನು ಪತ್ತೆಯಾಗಿದೆ? ಮೊದಲ ದಾಳಿಯಲ್ಲಿ 21 ಕೋಟಿ ರೂಪಾಯಿ ನಗದು, 56 ಲಕ್ಷ ರೂಪಾಯಿ ವಿದೇಶಿ ಹಣ ಮತ್ತು 76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಒಟ್ಟು 23.22 ಕೋಟಿ ರೂಪಾಯಿಯನ್ನು ಇಡಿ ವಶಕ್ಕೆ ಪಡೆದಿತ್ತು. ಇಂದು ನಡೆದ ದಾಳಿಯಲ್ಲಿ 20 ಕೋಟಿ ರೂ. ನಗದು ಮತ್ತು 2 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ ಪತ್ತೆಯಾಗಿದೆ. ಎರಡೂ ದಾಳಿಯಲ್ಲಿ ವಶಕ್ಕೆ ಪಡೆದ ಹಣದ ಮೌಲ್ಯ 45.22 ಕೋಟಿ ರೂಪಾಯಿ.
ಅರ್ಪಿತಾ ಮುಖರ್ಜಿ ಹೇಳಿದ್ದೇನು?
ಮೊದಲ ದಾಳಿಯ ಬೆನ್ನಲ್ಲೇ ಅರ್ಪಿತಾಳನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ತಮ್ಮ ಮನೆಯಲ್ಲಿ ದೊರೆತ ರಾಶಿ ರಾಶಿ ದುಡ್ಡಿನ ಬಗ್ಗೆ ಮಾತನಾಡಿರುವ ಅರ್ಪಿತಾ, ಆ ಹಣವೆಲ್ಲಾ ಸಚಿವ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎಂದಿದ್ದಾರೆ. ಆಕೆಗೆ ಸಂಪರ್ಕ ಹೊಂದಿರುವ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಇಡಲಾಗಿತ್ತು ಎಂಬುದು ತಿಳಿದುಬಂದಿದೆ. ಮನೆಯಿಂದ ಒಂದು ಅಥವಾ ಎರಡು ದಿನಗಳಲ್ಲಿ ಹಣದ ರಾಶಿಯನ್ನು ಸ್ಥಳಾಂತರಿಸುವ ಯೋಜನೆಯನ್ನು ವಿಚಾರಣೆ ಸಮಯದಲ್ಲಿ ಅರ್ಪಿತಾ ಬಹಿರಂಗಪಡಿಸಿದ್ದಾಳೆ. ಆದರೆ, ಇಡಿ ದಾಳಿಯು ಆಕೆಯ ಯೋಜನೆಯನ್ನು ತಲೆಕೆಳಗಾಗಿಸಿದೆ.
ಏನಿದು ಹಗರಣ?
ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್ಐಆರ್ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಇಡಿ, ಜುಲೈ 22ರಂದು ಅರ್ಪಿತಾ ಮನೆ ಮೇಲೆ ದಿಢೀರ್ ದಾಳಿ ಮಾಡಿತು. ಈ ವೇಳೆ 21 ಕೋಟಿ ರೂಪಾಯಿ ನಗದು ಹಾಗೂ 20ಕ್ಕೂ ಹೆಚ್ಚು ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಅಂದಹಾಗೆ ಸಚಿವ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ದಾಳಿಯನ್ನು ಖಂಡಿಸಿರುವ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೇಂದ್ರದ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಎದುರಾಳಿಗಳಿಗೆ “ಕಿರುಕುಳ” ನೀಡುವ “ಕುತಂತ್ರ” ಎಂದು ಆರೋಪಿಸಿದೆ. ಚಟರ್ಜಿ ಅವರು ಯಾವುದೇ ಹಗರಣ ಮಾಡಿಲ್ಲ. ಅದು ಅವರ ಸ್ವಂತ ಹಣ ಎಂದಿದೆ. ಆದಾಗ್ಯೂ, ತೃಣಮೂಲವು ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ, ಉನ್ನತ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಎಂದು ಬಿಜೆಪಿ ಆರೋಪಿಸಿದೆ. (ಏಜೆನ್ಸೀಸ್)