

ಭುವನೇಶ್ವರ: ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಬೊತ್ರಾ ಅವರು ಬುಧವಾರ ಟ್ವೀಟ್ ಮಾಡಿದ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೊತ್ರಾ ಅವರು ಒಡಿಶಾದ ಸಾರಿಗೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಫೋಟೋವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದಿದ್ದಾಗಿ ಮತ್ತು ಅದರ ಹಿಂದಿನ ಘಟನೆಯನ್ನು ವಿವರಿಸಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಬೊತ್ರಾ ಇತ್ತೀಚೆಗೆ ಯಾವುದೋ ಕೆಲಸ ಮೇಲೆ ಜೈಪುರಕ್ಕೆ ಹೋಗಿದ್ದಾಗ ಎಂದಿನಂತೆ ವಿಮಾನ ನಿಲ್ದಾಣದ ಸಿಬ್ಬಂದಿ ಅವರನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ ಏನಿದೆ ತೆಗೆದು ತೋರಿಸಿ ಎಂದು ಕೇಳಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಇದ್ದುದ್ದನ್ನು ನೋಡಿ ಸಿಬ್ಬಂದಿಯೇ ಒಂದು ಕ್ಷಣ ಅವಕ್ಕಾಗಿದ್ದಾರೆ.
ಅಸಲಿಗೆ ಐಪಿಎಸ್ ಅಧಿಕಾರಿಯ ಬ್ಯಾಗ್ ತುಂಬಾ ಬರೀ ಹಸಿರು ಬಟಾಣಿಯೇ ತುಂಬಿತ್ತು. ಅದನ್ನು ಕೆಜಿಗೆ 40 ರೂ.ನಂತೆ ಕೊಂಡುಕೊಂಡಿದ್ದಾಗಿ ಹೇಳಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದ ಫೋಟೋವನ್ನು ಬೊತ್ರಾ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈಗಾಗಲೇ 48 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬೊತ್ರಾ ಅವರ ಪೋಸ್ಟ್ಗೆ ಬಂದಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ವಿಮಾನದಲ್ಲಿ ತರಕಾರಿ ಸಾಗಿಸುವ ತಮ್ಮ ಅನುಭವವನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್, ಇದು ಕಾಳು ಕಳ್ಳಸಾಗಣೆ ಪ್ರಕರಣವೇ ಎಂದು ಲಘು ಟ್ವೀಟ್ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಹೀಗಾ ಸಾಕಷ್ಟು ಮಂದಿ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಅರುಣ್ ಬೊತ್ರಾ ಅವರು ಒಡಿಶಾ ಕೇಡರ್ನ ಐಪಿಎಸ್ ಅಧಿಕಾರಿ. ಟ್ವಿಟರ್ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರು ಟ್ವಿಟರ್ನಲ್ಲಿ 2 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. (ಏಜೆನ್ಸೀಸ್)