

ವಿಜಯವಾಡ: ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ತೆಗೆದುಕೊಂಡು ನಿರ್ಧಾರ ಆತಂಕಕಾರಿಯಾಗಿದೆ. ಮದುವೆ ಇಷ್ಟ ಇಲ್ಲದಿದ್ದರೆ ನೇರವಾಗಿ ಹೇಳಿಬಿಡಬೇಕು ಅದನ್ನು ಬಿಟ್ಟು ನಿಶ್ಚಯವಾದ ಭಾವಿ ಪತಿಯನ್ನೇ ಕೊಲ್ಲುವ ನಿರ್ಧಾರ ಎಷ್ಟರ ಮಟ್ಟಿಗೆ ಸರಿ? ಇಂಥದ್ದೊಂದು ಭಯಾನಕ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಈ ಘಟನೆ ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ರವಿಕಾಮತಮ್ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ರಾಮು ನಾಯ್ಡು ಹೈದರಾಬಾದ್ನ ಸಿಎಸ್ಐಆರ್ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮದುವೆ ಆರೋಪಿ ಯುವತಿ ಜತೆ ಮೇ 26ರಂದು ನಡೆಯಬೇಕಿತ್ತು. ಎರಡೂ ಮನೆಯವರು ಮದುವೆಗೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದರು. ಇತ್ತ ಯುವತಿಯು ಕೂಡ ರಾಮ ನಾಯ್ಡು ಜತೆ ಆಗಾಗ ಫೋನ್ನಲ್ಲಿ ಬಿಜಿಯಾಗಿರುತ್ತಿದ್ದಳು.
ಇತ್ತೀಚೆಗೆ ರಾಮ ನಾಯ್ಡುಗೆ ಕರೆ ಮಾಡಿದ ಯುವತಿ, ಒಂದು ಸರ್ಪ್ರೈಸ್ ಗಿಫ್ಟ್ ಇದೆ ಎಂದು ಹೇಳಿ ತಮ್ಮೂರಿಗೆ ಬರುವಂತೆ ಕೇಳಿದ್ದಳು. ಮರು ಮಾತನಾಡದೇ ರಾಮ ನಾಯ್ಡು ಭಾವಿ ಪತ್ನಿಯ ಊರಿಗೆ ಭೇಟಿ ನೀಡಿದ. ಬಳಿಕ ಇಬ್ಬರು ಬೆಟ್ಟದ ಮೇಲಿರುವ ಒಂದು ಸಣ್ಣ ದೇವಸ್ಥಾನ ಬಳಿ ಹೋದರು. ಈ ವೇಳೆ ಯುವತಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಕಣ್ಣು ಮುಚ್ಚು ಎಂದು ರಾಮ ನಾಯ್ಡುಗೆ ಹೇಳಿದ್ದಾರೆ. ಆತ ಕಣ್ಣು ಮುಚ್ಚಿದ ಬೆನ್ನಲ್ಲೇ ಆತನ ಗಂಟಲನ್ನು ಯುವತಿ ಸೀಳಿದ್ದಾಳೆ.
ಒಂದೆಡೆ ಗಂಟಲಿನಿಂದ ರಕ್ತ ಸುರಿಯುತ್ತಿದ್ದರೆ, ಯುವತಿ ಪಕ್ಕದಲ್ಲೇ ನಿಂತು ನೋಡುತ್ತಿದ್ದಳು. ಬೆಟ್ಟದ ಪ್ರದೇಶವಾಗಿದ್ದರಿಂದ ಸಹಾಯಕ್ಕಾಗಿ ಅಂಗಚಾಚಿದರೂ ಯಾರೊಬ್ಬರು ರಕ್ಷಣೆಗೆ ಬರಲಿಲ್ಲ. ಕೊನೆಗೆ ತನ್ನ ಫೋನ್ ತೆಗೆದು 108ಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿದೆ. ಇದರಿಂದ ರಾಮ ನಾಯ್ಡು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಈ ರೀತಿ ಮಾಡಿಕೊಂಡಿದ್ದಾನೆಂದು ಆರೋಪಿ ಯುವತಿ ಕತೆ ಕಟ್ಟಿದ್ದಾಳೆ. ಆದರೆ, ರಾಮ ನಾಯ್ಡು ಹೇಳಿಕೆಯಿಂದ ಯುವತಿಯ ಬಂಡವಾಳ ಬಯಲಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)