

ಹೈದರಾಬಾದ್: ಇಲಿಯಾನಾ ಡಿ ಕ್ರೂಸ್ ಭಾರತೀಯ ಸಿನಿರಂಗದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ನಟಿ. ತಮ್ಮ ಮಾದಕ ನೋಟದಿಂದಲೇ ಇಲಿಯಾನಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಇಲಿಯಾನಾ, ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ.
ಇಲಿಯಾನಾ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದರು. ಸಾಕಷ್ಟು ಅವಕಾಶಗಳು ಸಹ ಅವರನ್ನು ಹುಡುಕಿಕೊಂಡು ಬರುತ್ತಿತ್ತು. ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಇಲಿಯಾನಾಗೆ ದಿನಗಳು ಕಳೆಯುತ್ತಾ ಅವಕಾಶಗಳು ಕಡಿಮೆಯಾಗುತ್ತಾ ಬಂದವು. ಅದಕ್ಕೆ ಕಾರಣ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಿನಿಮಾಗಳು. ಏಕೆಂದರೆ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದ್ದರಿಂದ ಅವಕಾಶಗಳು ಸಂಪೂರ್ಣವಾಗಿ ನಿಂತುಹೋದವು.
ಇದಾದ ಬಳಿಕ ಇಲಿಯಾನಾ, ವಿದೇಶಿ ಪ್ರಜೆ ಆ್ಯಂಡ್ರಿವ್ ಎಂಬುವರ ಜೊತೆ ಲವ್ನಲ್ಲಿ ಬಿದ್ದರು. ಇಬ್ಬರು ತಮ್ಮ ಪ್ರೇಮ ಸಂಬಂಧವನ್ನು ಎಂಜಾಯ್ ಮಾಡುತ್ತಿದ್ದ ಸಾಕಷ್ಟು ಫೋಟೋಗಳು ಸಾಮಾಜಿಕ ಜಲಾತಾಣದಲ್ಲಿ ಹರಿದಾಡಿತ್ತು. ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ 2019ರಲ್ಲಿ ಇಬ್ಬರು ಬೇರೆಯಾದರು. ಇದು ಕೂಡ ದೊಡ್ಡ ಸುದ್ದಿಯಾಯಿತು. ಈ ಬಗ್ಗೆ ಮಾತನಾಡಿದ್ದ ಇಲಿಯಾನಾ ಪರಸ್ಪರ ಒಪ್ಪಿಗೆ ಮೇರೆಗೆ ವೈಯಕ್ತಿಕ ಕಾರಣಗಳಿಂದಾಗಿ ಇಬ್ಬರು ಬೇರೆ ಆಗಿದ್ದೇವೆ ಎಂದು ಹೇಳಿಕೊಂಡರು. ಅಲ್ಲದೆ, ಇಲಿಯಾನಾ ಗರ್ಭಿಣಿಯಾಗಿದ್ದರು ಮತ್ತು ಗರ್ಭಪಾತವು ಆಗಿದೆ ಎಂಬ ಸುದ್ದಿಯು ಹರಿದಾಡಿತ್ತು. ಅದೆಲ್ಲವು ಸುಳ್ಳು ಎಂದು ನಂತರದ ದಿನಗಳಲ್ಲಿ ಇಲಿಯಾನಾ ಸ್ಪಷ್ಟನೆ ಸಹ ನೀಡಿದರು.
ಸದ್ಯ ಇಲಿಯಾನಾ ಕುರಿತಾಗಿ ಹೊಸ ಸುದ್ದಿಯೊಂದು ಬಾಲಿವುಡ್ ಅಂಗಳದಿಂದ ಬಂದಿದೆ. ಕಳೆದ ಕೆಲವು ದಿನಗಳಿಂದ ಇಲಿಯಾನಾ ವ್ಯಕ್ತಿಯೊಬ್ಬರ ಜೊತೆ ಸಂಬಂಧದಲ್ಲಿದ್ದು, ಇಬ್ಬರು ಡೇಟಿಂಗ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಲಿಯಾನಾ ಡೇಟಿಂಗ್ ನಡೆಸುತ್ತಿರುವ ಆ ವ್ಯಕ್ತಿ ಬೇರೆ ಯಾರು ಅಲ್ಲ, ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮಿಚೆಲ್. ಮಿಚೆಲ್ ಮತ್ತು ಇಲಿಯಾನಾ ಈಗಾಗಲೇ ಶಾಪಿಂಗ್ ಸೇರಿದಂತೆ ಮದುವೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ಮದುವೆ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಬಾಲಿವುಡ್ನಲ್ಲಿ ಇಲಿಯಾನಾ ಕೊನೆಯದಾಗಿ ಅಭಿಷೇಕ್ ಬಚ್ಚನ್ ಅಭಿನಯದ ದಿ ಬಿಗ್ ಬುಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. (ಏಜೆನ್ಸೀಸ್)