ಉದ್ಯೋಗದ ಆಮಿಷವೊಡ್ಡಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ

Accused-Arrest
Published on

ಬೆಂಗಳೂರು: ಉದ್ಯೋಗದ ಆಮಿಷ ತೋರಿ ಹೊರ ರಾಜ್ಯಗಳಿಂದ ಹೆಣ್ಣು ಮಕ್ಕಳನ್ನು ಕರೆ ತಂದು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದ ಮೂವರನ್ನ ಬಂಧಿಸುವ ಮೂಲಕ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡುವಲ್ಲಿ ಆನೇಕಲ್ ಪೋಲಿಸರು ಯಶಸ್ವಿಯಾಗಿದ್ದಾರೆ.

ಆನೇಕಲ್-ಚಂದಾಪುರ ಮುಖ್ಯರಸ್ತೆಯಲ್ಲಿನ ವಿಬಿಎಚ್ಸಿ ಅಪಾರ್ಟ್ಮೆಂಟ್ ನಲ್ಲಿ ಮನೆ ಬಾಡಿಗೆ ಪಡೆದಿದ್ದ ವ್ಯಕ್ತಿಗಳು ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳಲ್ಲಿನ ಬಡ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಕೆಲಸ ಕೊಡಿಸುವ ಆಮಿಷವೊಡ್ಡಿ ಇಲ್ಲಿಗೆ ಕರೆತಂದು ಅವರನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು.

ಈ ಅಸಾಮಿಗಳು ಕೆಲ ವರ್ಷಗಳಿಂದ ಆನೇಕಲ್, ಚಂದಾಪುರ, ಹೆಬ್ಬಗೋಡಿ ಭಾಗಗಳಲ್ಲಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ರವರ ನೇತೃತ್ವದ ತಂಡ ವಿಬಿಎಸ್ಸಿ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು ಮೂರು ಮಂದಿ ಅಸಾಮಿಗಳನ್ನು ಬಂಧಿಸಿ ಮೂವರ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ, ವಶಕ್ಕೆ ಪಡೆದ ಮೂವರು ಹೆಣ್ಣುಮಕ್ಕಳನ್ನು ಸಾಂತ್ವನ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ಪ್ರಕರಣ ಸಂಬಂಧ ಆನೇಕಲ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ಇನ್ನಷ್ಟು ತನಿಖೆ ನಡೆಸಲು ಆನೇಕಲ್ ಪೊಲೀಸರು ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net