ಪುತ್ತೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದ್ದು, ಕೋಡಿಂಬಾಡಿ ಶಾಂತಿನಗರ ಶಾಲೆಯ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಪಕ್ಕದ ಮನೆಯಿಂದ ಹಾರೆ ತಂದು ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ಚರಂಡಿಗೆ ಹೋಗುವಂತೆ ಮಾಡಿದ್ದಾರೆ.
ಮಳೆಗಾಲದ ಸಿದ್ಧತೆಯನ್ನು ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಮಾಡಿದ ಕಾರಣದಿಂದ ರಸ್ತೆಗಳಲ್ಲಿ ಕೃತಕ ನೆರೆಯುಂಟಾಗುತ್ತಿದೆ. ಕೆಲವು ದಿನಗಳ ಹಿಂದೆ ಮಳೆಗಾಲದ ಸಿದ್ಧತೆಯ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ನಡೆಸಿದ್ದು, ಇದಕ್ಕೂ ಬೆಲೆ ಕೊಡುವ ಕಾರ್ಯ ಇಲಾಖೆಗಳಿಂದ ಆಗಿರಲಿಲ್ಲ.
ಇದರ ನೈಜ ದರ್ಶನ ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿ ತೆರಳುತ್ತಿದ್ದ ಶಾಸಕರಿಗೆ ಆಗಿದೆ. ರಸ್ತೆಯನ್ನು ಅಯೋಮಯವಾಗಿಸುವಷ್ಟು ನೀರು ಹರಿಯುತ್ತಿದ್ದುದನ್ನು ತಾವೇ ಹಾರೆ ಹಿಡಿದು ಚರಂಡಿಗೆ ಹೋಗುವಂತೆ ಮಾಡಿದ್ದಾರೆ.
ಶಾಸಕರಿಗೆ ಬೇಡಿಕೆ!
ಶಾಸಕರು ಹಾರೆ ಹಿಡಿದು ರಸ್ತೆ ಬದಿಯ ಕಣಿ ರಿಪೇರಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕರಿಗೆ ಬೇಡಿಕೆ ಸೂಚನೆ ಕಂಡುಬಂದಿದೆ. ಹಲವು ರಸ್ತೆಗಳಲ್ಲಿ ಬಹುಗ್ರಾಮ ಯೋಜನೆ ಕಾಮಗಾರಿ ವೇಳೆ ಚರಂಡಿಗಳನ್ನು ಮುಚ್ಚಿದರೆ, ಇನ್ನುಳಿದಲ್ಲಿ ಅಧಿಕಾರಿಗಳು ಚರಂಡಿ ದುರಸ್ತಿಗೆ ಮುಂದಾಗಿಲ್ಲ. ಈ ಕಾರಣದಿಂದ ಶಾಸಕರೇ ಪ್ರತಿಯೊಂದು ಕಡೆಯಲ್ಲಿ ದುರಸ್ತಿ ಮಾಡಲಿ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.