

ಪುತ್ತೂರು: ಜಲಸಿರಿಗೆ ಸರಿಯಾದ ಡಿಪಿಆರ್ ಮಾಡದ ಕಾರಣ ಪೈಪ್ ಒಡೆದು ಹೋಗುವ ಸಮಸ್ಯೆ ತಲೆದೋರುತ್ತಿದೆ. ಕುಡ್ಸೆಂಪ್ ಯೋಜನೆಯಲ್ಲಿ ಲೈನ್ ಅಳವಡಿಸಿ ಚಾರ್ಜ್ ಮಾಡದೆ ಹಣ ಪಡೆದು ಹೋಗಿರುವುದು ಸರಿಯಲ್ಲ. ಕೊಳವೆಬಾವಿಯ ಸಂಪರ್ಕ ಕಡಿತ ಮಾಡಿ ಪೈಪ್‌ಲೈನ್ ಜೋಡಣೆ ಮಾಡಬೇಕು. ರಸ್ತೆಗಳನ್ನು ತ್ವರಿತವಾಗಿ ಸರಿಪಡಿಸಿಕೊಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಮಂಗಳವಾರ ನಗರಸಭೆಯಲ್ಲಿ ನಡೆದ ಜಲಸಿರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪ್ರತಿ ಬಾರಿಯೂ ಸಮಯಾವಕಾಶ ಕೇಳುವ ಬದಲು ಬೇಗ ಕೆಲಸ ಮುಗಿಸಿ ಜನರಿಗೆ ನೀರು ನೀಡಬೇಕು. ಯೋಜನೆಯ ಆರಂಭದ ದಿನದಲ್ಲಿ ಸಮಸ್ಯೆಗಳು ಸಹಜವಾಗಿದ್ದು, ಎಲ್ಲವೂ ಪೈಪ್‌ನದ್ದೇ ಸಮಸ್ಯೆಯೆಂದು ಹೇಳಲಾಗುವುದಿಲ್ಲ. ತೀವ್ರ ರೀತಿಯಲ್ಲಿ ನೀರು ಪೊಲಾಗಿ ಹೋಗುತ್ತಿದ್ದು, ಅದನ್ನು ಪರಿಹರಿಸಲು ವಿಶೇಷ ಕಾರ್ಯಪಡೆ ರಚಿಸಬೇಕು. ರಸ್ತೆಯನ್ನು ತುಂಡು ಮಾಡುವುದಾದರೆ ಅಲ್ಲಿ ವ್ಯವಸ್ಥಿತವಾಗಿ ಕಾಮಗಾರಿಯನ್ನು ಪೂರ್ಣಮಾಡುವ ಯೋಜನೆ ಹಾಕಬೇಕು ಎಂದು ತಿಳಿಸಿದರು.
ಪೌರಾಯುಕ್ತ ಮಧು ಎಸ್. ಮನೋಹರ ಮಾತನಾಡಿ, ನಗರಸಭೆಗೆ ನೀರಿನ ಸಮಸ್ಯೆಯ ಬಗ್ಗೆ ೬೨೩ ದೂರು ಕೇವಲ ಪಿವಿಸಿ ಪೈಪ್‌ನಿಂದಲೇ ಬಂದಿದೆ. ನೀರಿನ ಪೈಪ್ ಅಳವಡಿಕೆಗೆ ರಸ್ತೆಯನ್ನು ಅಗೆದು ಹಾಕಿದಲ್ಲಿ ಅದರ ದುರಸ್ತಿ ಕಾರ್ಯವನ್ನು ಜಲಸಿರಿಯವರೇ ಮಾಡಬೇಕಾಗಿದೆ ಎಂದರು.
ಜಲಸಿರಿ ಎಇಇ ಮದೇಶ್ ಮಾತನಾಡಿ, ಜ.೧ರಿಂದ ಮೂರು ತಿಂಗಳು ಟ್ರಯಲ್ ನಡೆಸಿದ್ದರೂ ಇನ್ನಷ್ಟು ಸಮಯದ ಅಗತ್ಯವಿದೆ. ನಿತ್ಯ ನೀರು ಸರಬರಾಜು ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಜತೆಗೆ ಮಾಡಲಾಗುತ್ತಿದೆ. ೧೫.೫ಎಂ.ಎಲ್.ಡಿ. ನೀರೆತ್ತುವ ಉದ್ದೇಶ ಇಟ್ಟುಕೊಳ್ಳಲಾಗಿದ್ದು, ೯ ಎಂ.ಇಲ್.ಡಿ. ನೀರು ತೆಗೆಯಲಾಗುತ್ತಿದೆ ಎಂದರು.
ಗುತ್ತಿಗೆದಾರ ಪ್ರಮೋದ್ ಮಾತನಾಡಿ ೧೫೮ ಕಿ.ಮೀ. ಜಲಸಿರಿ ಪೈಪ್ ಅಳವಡಿಸಿದ್ದು, ೪೬ ಕಿ.ಮೀ ಪಿವಿಸಿ ನೆಟ್ವರ್ಕ್ ಇದೆ. ಪಿವಿಸಿ ಬದಲಾವಣೆಯ ಕೆಲಸಕ್ಕೆ ಸಮಯ ಹೆಚ್ಚು ಬೇಕಾಗುತ್ತದೆ. ಮೂರು ಜೋನ್‌ಗಳನ್ನು ಮುಂದಿನ ತಿಂಗಳಿಗೆ ಮುಗಿಸುವ ಪ್ರಯತ್ನ ಮಾಡುತ್ತೇವೆ. ಪೀಕ್ ಸಮಯ ವಿದ್ಯುತ್ ಕೈಕೊಡುವುದರಿಂದ ಟ್ಯಾಂಕ್ ತುಂಬಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸರಿಯಾದ ಸಮಯಕ್ಕೆ ನೀರು ನೀಡಲು ಕಷ್ಟವಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಜಲಸಿರಿ ಇಇ ಕುಮಾರ ಸ್ವಾಮಿ, ನಗರಸಭೆ ಸದಸ್ಯರಾದ ಯೂಸುಫ್ ಡ್ರೀಮ್, ಮಹಮ್ಮದ್ ರಿಯಾಝ್ ಪರ್ಲಡ್ಕ, ಶೈಲಾ ಪೈ, ದಿನೇಶ್ ಶೇವಿರ, ರಾಬಿನ್ ತಾವ್ರೋ ಸಾಲ್ಮರ, ಜಲಸಿರಿ ವಿವಿಧ ಹಂತದ ಅಽಕಾರಿಗಳು ಹಾಜರಿದ್ದರು.
ತಡವಾಗಿದ್ದಕ್ಕೆ ಸಭಾತ್ಯಾಗ!
ನಗರಸಭೆಯಲ್ಲಿ ಜಲಸಿರಿ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನಾ ಸಭೆಗೆ ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಸದಸ್ಯರನ್ನು ಆಹ್ವಾನಿಸಿ ೪.೩೦ರವರೆಗೆ ಕಾದರೂ ಶಾಸಕರು ಆಗಮಿಸದಿರುವುದನ್ನು ಖಂಡಿಸಿ ನಗರಸಭೆಯ ಬಿಜೆಪಿ ಬೆಂಬಲಿತ ೨೫ ಸಭಾತ್ಯಾಗ ಮಾಡಿದರು. ನಗರ ಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾಧ್ಯಮಗಳ ಜತೆ ಮಾತನಾಡಿ ಶಾಸಕರನ್ನು ಬಹಳಷ್ಟು ಹೊತ್ತು ಕಾದು ಬಳಿಕ ಕಮಿಷನರ್ ಬಳಿ ಸಭೆ ನಡೆಸಿ ನಮ್ಮ ವಾರ್ಡ್‌ಗಳಲ್ಲಿ ಬಹಳಷ್ಟು ಸಮಸ್ಯೆಗಳಿವೆ ಅದನ್ನು ಹೇಳುತ್ತೇವೆ ಎಂದು ಹೇಳಿಕೊಂಡರೂ ಅವರೂ ಸಭೆ ನಡೆಸಲಿಲ್ಲ. ನಾವು ಚುನಾಯಿತ ಪ್ರತಿನಿಽಗಳಾಗಿದ್ದು, ನಮಗೆ ನಮ್ಮದೇ ಆದ ಗೌರವವಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗದೇ ಇರುವುದರಿಂದ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶಗಳಿಲ್ಲ. ಈ ಎಲ್ಲ ಬೆಳವಣಿಗೆಗಳು ಬೇಸರ ತರಿಸಿರುವುದರಿಂದ ಸಭಾತ್ಯಾಗ ಮಾಡಿದ್ದೇವೆ ಎಂದು ತಿಳಿಸಿದರು.