

ಪುತ್ತೂರು: ಲಂಡನ್ ಥಿಯೇಟರ್ ಮಾದರಿಯಲ್ಲಿ ನಿರ್ಮಾಣವಾಗಿದ್ದ ನೆಲ್ಲಿಕಟ್ಟೆ ಸರ್ಕಾರಿ ಶಾಲೆಯ ಕಟ್ಟಡವನ್ನು ಪುನರುತ್ಥಾನದ ಹೆಸರಲ್ಲಿ ಕೆಡವಿ ವಿದ್ಯಾರ್ಥಿಗಳ ಕಲಿಕೆಗೆ ನೆಲೆಯಿಲ್ಲದಂತೆ ಮಾಡಲಾಗಿತ್ತು. ಹೊಸ ಕಟ್ಟಡ ನಿರ್ಮಾಣ ಮಾಡಬೇಕಾದ ಸರ್ಕಾರದ ಪ್ರತಿನಿಽಗಳು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಈಗ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ವತಿಯಿಂದ ನಡೆಯುವ ವಿಶೇಷ ಚಿಣ್ಣರ ಲೋಕ(ಸಿದ್ಧತಾ ಕೇಂದ್ರ)ಕ್ಕೆ ಶಾಸಕರ ವಿಶೇಷ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ತಾಲೂಕಿನ ವಿಶೇಷ ಮಕ್ಕಳಿಗೆ ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಮರ್ಪಕ ಕಟ್ಟಡ ಇಲ್ಲದ ಕಾರಣ ಮಕ್ಕಳನ್ನು ಸಣ್ಣ ಕೊಠಡಿಯಲ್ಲಿಟ್ಟು ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯ ವಾರದಲ್ಲಿ ೩೫ ವಿದ್ಯಾರ್ಥಿಗಳು ಕೇಂದ್ರಕ್ಕೆ ಬಂದು ಹೋಗುತ್ತಿದ್ದು, ಸಿದ್ಧತಾ ಕೇಂದ್ರದಲ್ಲಿ ಆಸ್ಪತ್ರೆಯ ಮೂಲಕ ಫಿಸಿಯೋಥೆರಪಿ ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಜಾಗದ ಸಮಸ್ಯೆ ಮನಗಂಡು ಹೆಚ್ಚುವರಿ ಕಟ್ಟಡ ಹಾಗೂ ಸುಸಜ್ಜಿತ ಶೌಚಗೃಹಕ್ಕೆ ಶಾಸಕ ಅಶೋಕ್ ಕುಮಾರ್ ರೈ ೯ ಲಕ್ಷ ರೂ. ವಿಶೇಷ ಅನುದಾನ ಒದಗಿಸಿದ್ದಾರೆ.
ಶಿಕ್ಷಣ ಇಲಾಖೆಗೆ ಸೇರಿದ ಜಾಗದಲ್ಲಿ ವಿಶೇಷ ಮಕ್ಕಳ ಸಿದ್ಧತಾ ಕೇಂದ್ರದ ಕಾಮಗಾರಿ ಆರಂಭಿಸಿದ್ದು, ಶಾಲಾಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿಗಳ ಪಾಲಕರ ಕೆಂಗಣ್ಣಿಗೆ ಗುರಿಯಾಗಿದೆ. ಮಂಗಳವಾರ ಎಸ್‌ಡಿಎಂಸಿ ಪ್ರಮುಖರು ಆಗಮಿಸಿ ಕೆಲಸ ಮಾಡದಂತೆ ಸೂಚಿಸಿದ್ದಾರೆ. ಆದರೆ ಗುತ್ತಿಗೆದಾರರು ಎಚ್ಚರಿಕೆಗೆ ಬಗ್ಗದ ಹಿನ್ನೆಲೆಯಲ್ಲಿ ಬುಧವಾರ ವಿದ್ಯಾರ್ಥಿಗಳ ಪಾಲಕರು ಹಾಗೂ ಸ್ಥಳೀಯ ನಗರಸಭೆ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದಾಗ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಽಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಇವರಲ್ಲಿ ಮಾತುಕತೆ ನಡೆಸಿದರು.
ಹೊಸ ಕಟ್ಟಡಕ್ಕಾಗಿ ಶೌಚಗೃಹ ತೆರವು
ಸಿದ್ಧತಾ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕೆ ಸದ್ಯ ಇರುವ ಕಟ್ಟಡದ ಹಿಂಭಾಗದಲ್ಲಿ ಜಾಗ ನಿಗದಿ ಮಾಡಲಾಗಿದೆ. ಈ ಸಂದರ್ಭ ಚಿಣ್ಣರ ಲೋಕದ ಬಳಕೆಯಲ್ಲಿದ್ದ ಶೌಚಗೃಹ ತೆರವು ಮಾಡಿದ್ದರಿಂದ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕಟ್ಟಡ ಕಾಮಗಾರಿಯನ್ನು ತ್ವರಿತವಾಗಿ ಮಾಡದೆ ಹೋದರೆ ವಿಶೇಷ ಮಕ್ಕಳಿಗೆ ನೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.
ರಸ್ತೆ ಬದಿಯಲ್ಲೇ ಕಟ್ಟಲಿ
ಹೊಸ ಕಟ್ಟಡ ನಿರ್ಮಾಣ ವಿರೋಽಸಿ ಬುಧವಾರ ಪ್ರತಿಭಟನೆಗೆ ಮುಂದಾದ ಕೆಲವರು ಯಾವುದೇ ಕಾರಣಕ್ಕೂ ಕಟ್ಟಡವನ್ನು ಈಗಿನ ಸ್ಥಳದಲ್ಲಿ ನಿರ್ಮಿಸಬಾರದು. ಮಕ್ಕಳನ್ನು ಬಿಡಲು ಬರುವ ವಾಹನಗಳಿಂದ ಶಾಲೆಯ ಕೊಠಡಿಯೊಳಗೆ ಧೂಳು ಬರುತ್ತದೆ. ಅದಕ್ಕಾಗಿ ಜಾಗ ಬದಲು ಮಾಡಬೇಕು. ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅಽಕಾರಿಗಳಲ್ಲಿ ವಾದ ಮುಂದಿಟ್ಟಿದ್ದಾರೆ.
ಶಾಲೆಯಲ್ಲಿ ತುರ್ತು ಸಭೆ
ಈ ಮಧ್ಯೆ ಬುಧವಾರ ಎಸ್‌ಡಿಎಂಸಿ ಹಾಗೂ ಪಾಲಕರ ನೇತೃತ್ವದಲ್ಲಿ ಶಾಲೆಯಲ್ಲಿ ತುರ್ತು ಸಭೆ ನಡೆಸಲಾಯಿತು. ನಗರಸಭೆ ಸದಸ್ಯ ರಮೇಶ್ ರೈ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ನೆಲ್ಲಿಕಟ್ಟೆ ಮಿತ್ರಮಂಡಲ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಹಳೇ ವಿದ್ಯಾರ್ಥಿ, ಮಿತ್ರ ಮಂಡಲ ಕಾರ್ಯದರ್ಶಿ ರೋಹಿತ್ ಕುಮಾರ್, ಮಕ್ಕಳ ಪಾಲಕರಾದ ಶೇಖರ ಬ್ರಹ್ಮನಗರ, ಹರೀಶ್ ಬ್ರಹ್ಮನಗರ, ಸ್ಥಳೀಯರಾದ ಗೌತಮ್ ರಾವ್, ನಗರ ಕಾಂಗ್ರೆಸ್ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮಿತ್ರ ಮಂಡಲದ ಶಶಿಕುಮಾರ್, ವರ್ತಕರ ಸಂಘದ ಉಲ್ಲಾಸ ಪೈ ಮತ್ತಿತರರು ಉಪಸ್ಥಿತರಿದ್ದರು.
ನೆಲ್ಲಿಕಟ್ಟೆ ಶಾಲೆ ೧೫೯ ವರ್ಷದ ಇತಿಹಾಸ ಹೊಂದಿದ್ದು, ೮೫ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ಆವರಣದೊಳಗೆ ಶೌಚಗೃಹ, ಅನ್ನದಾಸೋಹದ ಕಟ್ಟಡ, ಶಿಕ್ಷಕರ ಕೊಠಡಿ, ವಿದ್ಯಾರ್ಥಿಗಳ ವಿಶ್ರಾಂತಿಗೃಹ ಇತ್ಯಾದಿ ವ್ಯವಸ್ಥೆಗಳಿಲ್ಲ. ಶಾಲೆ ಜಾಗಕ್ಕೆ ಯಾರೂ ಬಂದು ಹೋಗಬಹುದೆಂಬ ವಾತಾವರಣವಿದೆ. ಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆ, ಅಂಗವಿಕಲ ಮಕ್ಕಳ ಶಾಲೆ, ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರಗಳೂ ಇವೆ. ಸಮರ್ಪಕ ತಡೆಗೋಡೆ ವ್ಯವಸ್ಥೆ ಇಲ್ಲದೆ ಎಂಟು ಭಾಗದಿಂದಲೂ ಒಳಗೆ ಬರಬಹುದು. ಅಂಗವಿಕಲ ವಿದ್ಯಾರ್ಥಿಗಳಿಗೆ ಸಂಬಂಽಸಿದ ಶಾಲೆಯ ನಿರ್ಮಾಣಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಅದಕ್ಕೆ ನಿಮಗೆ ಇಷ್ಟ ಬಂದ ಜಾಗದಲ್ಲಿ ಕಟ್ಟಡ ಕಟ್ಟುವುದಲ್ಲ.
| ರಾಜೇಶ್ ಬನ್ನೂರು
ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ
ಸ್ಥಳೀಯ ಯುವಕ ಮಂಡಲ, ಮಿತ್ರಮಂಡಲ, ಎಸ್‌ಡಿಎಂಸಿ ಸಮಿತಿಯ ಗಮನಕ್ಕೆ ತಾರದೆ ಸರ್ಕಾರಿ ಕಟ್ಟಡ ಮಾಡುವುದಕ್ಕೆ ಅರ್ಥವಿಲ್ಲ. ಈ ನಿಟ್ಟಿನಲ್ಲಿ ಶಾಸಕರಿಗೆ ಹಾಗೂ ಅಽಕಾರಿಗಳಿಗೆ ಮನವಿ ನೀಡಲಾಗಿದೆ. ಶಾಲೆಯ ಆವರಣಕ್ಕೆ ವಾಹನಗಳು ಬರಬಾರದೆಂಬ ಉದ್ದೇಶ ಇಟ್ಟುಕೊಳ್ಳಲಾಗಿದೆ. ಅಂಗವಿಲಕ ಮಕ್ಕಳ ಪರಿಸ್ಥಿತಿ ನೋಡುವಾಗ ಶಾಲೆಯ ಅಗತ್ಯವೂ ಇದೆ. ಸರಿಯಾದ ಜಾಗದಲ್ಲಿ ಅದನ್ನು ನಿರ್ಮಾಣ ಮಾಡುವುದು ಬಿಟ್ಟು ಮೂಲೆಯಲ್ಲಿ ಮಾಡುವುದಕ್ಕೆ ನಮ್ಮ ಆಕ್ಷೇಪವಿದೆ. ಸರ್ಕಾರಿ ಶಾಲೆಯಲ್ಲಿರುವ ೮೦ ಮಕ್ಕಳ ಜವಾಬ್ದಾರಿಯೂ ಇದ್ದು, ಅವರನ್ನು ಬದಿಗೆ ಸರಿಸಿ ಅಂಗವಿಕಲ ಮಕ್ಕಳು ಎಂದು ಹೇಳುವುದು ಸರಿಯಲ್ಲ.
| ರಮೇಶ್ ರೈ
ಪುತ್ತೂರು ನಗರಸಭೆ ಸದಸ್ಯ