ಝೆಲೆನ್ಸ್ಕಿ ಜತೆ ಮಾತನಾಡಲು ರಷ್ಯಾ ಅಧ್ಯಕ್ಷ ಪುಟಿನ್​ ಸಿದ್ಧ ಆದರೆ..; ಕ್ರೆಮ್ಲಿನ್ ವಕ್ತಾರರು ಹೇಳಿದ್ದೇನು? | Russia

Untitled design (45) (1)
Published on

ಮಾಸ್ಕೋ: ರಷ್ಯಾ(Russia) ಮತ್ತು ಯುಕ್ರೇನ್ ನಡುವಿನ ಯುದ್ಧ ಮೂರು ವರ್ಷಗಳಿಗೂ ಹೆಚ್ಚು ಕಾಲ ನಡೆಯುತ್ತಿದೆ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ಈ ಯುದ್ಧವನ್ನು ಕೊನೆಗೊಳಿಸಲು ಹಲವು ದೇಶಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ರಷ್ಯಾ ಮತ್ತು ಯುಕ್ರೇನ್ ನಡುವೆ ಕದನ ವಿರಾಮ ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿರುವ ಸಮಯದಲ್ಲಿ ಮತ್ತು ಈ ನಿಟ್ಟಿನಲ್ಲಿ ರಷ್ಯಾ ಮತ್ತು ಅಮೆರಿಕದ ರಾಜತಾಂತ್ರಿಕರು ಸಭೆ ಸೇರುತ್ತಿರುವ ಸಮಯದಲ್ಲಿ ರಷ್ಯಾದಿಂದ ದೊಡ್ಡ ಹೇಳಿಕೆಯೊಂದು ಹೊರಬಂದಿದೆ.

ವಾಸ್ತವವಾಗಿ ಅಗತ್ಯವಿದ್ದರೆ ರಷ್ಯಾದ ಅಧ್ಯಕ್ಷ ಪುಟಿನ್ ಯುಕ್ರೇನ್​​ನ ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ಕ್ರೆಮ್ಲಿನ್ ಹೇಳಿದೆ. ಅಗತ್ಯವಿದ್ದರೆ ಝೆಲೆನ್ಸ್ಕಿ ಜತೆ ಮಾತುಕತೆ ನಡೆಸಲು ಸಿದ್ಧ ಎಂದು ಸ್ವತಃ ಪುಟಿನ್ ಹೇಳಿದ್ದರು. ಆದರೆ ಝೆಲೆನ್ಸ್ಕಿಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಬಹುದೆಂಬ ವಾಸ್ತವವನ್ನು ಪರಿಗಣಿಸಿ ಒಪ್ಪಂದಗಳ ಕಾನೂನು ಆಧಾರವನ್ನು ಚರ್ಚಿಸುವ ಅಗತ್ಯವಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ರಷ್ಯಾ ಮತ್ತು ಅಮೆರಿಕದ ಮಾತುಕತೆಗಳು ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಸಂಭಾವ್ಯ ಭೇಟಿಯ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ನೀಡಬಹುದು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಂಗಳವಾರ ಹೇಳಿದ್ದಾರೆ. ಆದರೆ ಈ ಪ್ರಶ್ನೆಗೆ ಇನ್ನೂ ಒಮ್ಮತ ಮೂಡಿಲ್ಲ.

ಯುಕ್ರೇನ್‌ನಲ್ಲಿ ವರ್ಷಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಬರಲು ಇಂದು ಸೌದಿ ಅರೇಬಿಯಾದಲ್ಲಿ ರಷ್ಯಾದ ಮತ್ತು ಅಮೆರಿಕದ ಉನ್ನತ ರಾಜತಾಂತ್ರಿಕರು ಸಭೆ ಸೇರುತ್ತಿರುವ ಸಮಯದಲ್ಲಿ ಈ ಘೋಷಣೆ ಮಾಡಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net