ಬಾಲಕಾರ್ವಿುಕರಾಗೋದು ಬೇಡ, ಆದರೆ ಕೆಲಸದ ಮಹತ್ವ ಗೊತ್ತಿರಲಿ

kids putani
Published on

ಈ ಜಗತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಅನುಕೂಲದಷ್ಟೇ ಅನನುಕೂಲವೂ ಬೆಳೆಯುತ್ತಿದೆ. ನಮಗೆ ಬೇಕಾದ ಒಳ್ಳೆಯದನ್ನು ನಾವು ಪಡೆದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಬದುಕಲು ನೆರವಾಗುವ ಸಣ್ಣ ಪುಟ್ಟ ಸಂಗತಿಗಳನ್ನು ಈಗಲೇ ಕಲಿತರೆ ಮುಂದೆಂದೋ ನೆರವಿಗೆ ಬರುತ್ತವೆ. ಈ ಸಣ್ಣ ವಿಷಯಗಳನ್ನ ಕಲಿಯೋಕೆ ನಮ್ಮ ಪುಟಾಣಿ ವಯಸ್ಸು ಒಂದು ರೀತಿ ಅಡಿಪಾಯವೇ ಸರಿ.

| ಅರುಣ ಎಂ.ಜಿ.

ಮಕ್ಕಳೇ, ಚೆನ್ನಾಗಿ ಓದಬೇಕು, ಹೆಚ್ಚು ಅಂಕ ಪಡೆದು ರ್ಯಾಂಕ್ ಬರಬೇಕು, ಮುಂದೆ ಒಳ್ಳೆಯ ಕಾಲೇಜಿನಲ್ಲಿ ಇಷ್ಟಪಟ್ಟ ಕೋರ್ಸ್​ಗೆ ಸೀಟ್ ಗಿಟ್ಟಿಸಿಕೊಳ್ಳಬೇಕು, ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು... ಇದೆಲ್ಲವೂ ಉತ್ತಮ ಗುರಿ. ಇದರ ಜತೆಗೆ ಬಾಲ್ಯದಲ್ಲೇ ಸಣ್ಣ-ಪುಟ್ಟ ಕೆಲಸ ಕಲಿತರೆ ನಿಮ್ಮ ಬದುಕು ಹಸನಾಗುವ ಜತೆಗೆ ಇತರರಿಗೆ ಮಾದರಿಯಾಗುತ್ತೀರಿ. ಅರೆ, ನಾವಿನ್ನೂ ಚಿಕ್ಕ ಮಕ್ಕಳು, ಯಾವ ಕೆಲಸ, ಎಲ್ಲಿ ಮಾಡೋದು? ಬಾಲ ದುಡಿಮೆ ತಪ್ಪಲ್ಲವೇ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವುದು ಸಹಜ.

ಓದು ಬಿಟ್ಟು ಕೆಲಸ ಮಾಡಬೇಕು ಅಂತಲ್ಲ. ಚಿಕ್ಕ ವಯಸ್ಸಿನಲ್ಲಿ ಓದುತ್ತಾ, ಆಡುತ್ತಲೇ ಸಣ್ಣಪುಟ್ಟ ಕೆಲಸಗಳ ಬಗ್ಗೆ ಅರಿಯಬೇಕು. ಅಮ್ಮನ ಮನೆ ಕೆಲಸದಲ್ಲಿ ನೆರವಾಗುವುದು ಆರಂಭಿಕ ಹೆಜ್ಜೆಯಾಗಲಿ. ಮುಂದುವರಿದಂತೆ ಇತರ ವಲಯದ ಕಾರ್ವಿುಕರ ಕೆಲಸ, ಅವರ ಬದುಕಿನ ಬವಣೆ ಅರಿಯಬೇಕು. ಮುಂದೊಂದು ದಿನ ಇದೇ ನಿಮ್ಮ ಬದುಕಿನ ಟರ್ನಿಂಗ್ ಪಾಯಿಂಟ್ ಆಗಬಹುದು. ಅಂತಹ ಜನರ ಅನುಕೂಲಕ್ಕಾಗಿ ನೀವೇ ಏನಾದರೊಂದು ಹೊಸ ಸಂಶೋಧನೆ ಕೈಗೊಂಡರೂ ಅಚ್ಚರಿ ಇಲ್ಲ. ಭವಿಷ್ಯದಲ್ಲಿ ಎಂತಹ ಸಮಸ್ಯೆ ಎದುರಾದರೂ ನಿಭಾಯಿಸುವ ಮನೋಸ್ಥೈರ್ಯ ಹೆಚ್ಚುತ್ತದೆ. ವೃತ್ತಿಯ ಜತೆಗೆ ಒಳ್ಳೆಯ ಪ್ರವೃತ್ತಿಯೂ ಬೆಳೆದು ಹಲವರ ಬದುಕಿಗೆ ನೀವೇ ಆಧಾರವಾಗಿ ನಿಲ್ಲಲೂಬಹುದು. ಅಂದಹಾಗೆ ಮಕ್ಕಳೇ, ಬಾಲಕಾರ್ವಿುಕ ಪದ್ಧತಿ ನಮ್ಮ ದೇಶದಲ್ಲಿ ನಿಷಿದ್ಧ. 14 ವರ್ಷದೊಳಗಿನ ಮಕ್ಕಳಿಂದ ಕಟ್ಟಡ ನಿರ್ವಣ, ಗಾರ್ವೆಂಟ್ಸ್, ಗ್ಯಾರೇಜ್, ಗಣಿಗಾರಿಕೆ, ಹೋಟೆಲ್ ಮುಂತಾದೆಡೆ ದುಡಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಮಕ್ಕಳಿಂದ ದುಡಿಸಿಕೊಳ್ಳುವವರಿಗೆ ಜೈಲು ಶಿಕ್ಷೆ ಮತ್ತು ದಂಡದ ಸಜೆ ತಪ್ಪಿದ್ದಲ್ಲ. ಆದರೆ, ಓದುತ್ತಲೇ ಮುಂದೆ ನಮ್ಮ ಜೀವನಕ್ಕೆ ನೆರವಾಗುವ ಕೆಲವು ಕೆಲಸಗಳನ್ನು ಕಲಿಯಲು ಮತ್ತು ಮಾಡಲು ಏನೂ ತೊಂದರೆ ಇಲ್ಲ. ಇದು ಬದುಕಿನ ಪಾಠ ತಿಳಿಸುವ ಜತೆಗೆ ಕುಟುಂಬದ ಆರ್ಥಿಕ ಬಲವನ್ನೂ ವೃದ್ಧಿಸುತ್ತದೆ.

ಕೈ ತೋಟದಿಂದಲೂ ಕಾಸು!

ಮನೆಯ ಹಿತ್ತಲಲ್ಲಿ ಅಮ್ಮನೋ ಅಜ್ಜಿಯೋ ಬೆಳೆದ ಸೊಪ್ಪು-ತರಕಾರಿ-ಹೂವನ್ನು ಮಾರಾಟ ಮಾಡಿ ಮನೆಯ ಖರ್ಚಿಗೆ ಹಣ ಸಹಾಯ ಆಗುವಂತೆ ಮಾಡಿ. ಸಾಧ್ಯವಾದರೆ ಮನೆ ಅಂಗಳದಲ್ಲಿ ಕೈತೋಟ ನಿರ್ವಿುಸಿ, ಲಾಭದಾಯಕ ಸಣ್ಣಪುಟ್ಟ ಬೆಳೆ ಬೆಳೆದು ಮಾರಿ. ನೀವು ಮಾರುಕಟ್ಟೆಗೆ ಹೋಗಬೇಕಿಲ್ಲ, ಅಕ್ಕಪಕ್ಕದ ಮನೆ, ಕಿರಾಣಿ ಅಂಗಡಿಗೆ ಕೊಟ್ಟರಾಯಿತು. ಕನಕಾಂಬರ, ಮಲ್ಲಿಗೆ, ಕಾಕಡ ಹೂವಿಗೆ ಡಿಮಾಂಡ್ ಇದ್ದೇ ಇರುತ್ತೆ. ಇವುಗಳನ್ನು ನಿತ್ಯ ನೀವೇ ಬಿಡಿಸಬೇಕೆಂದಿಲ್ಲ. ಹೂವು ಬೇಕಿದ್ದವರು ಬಂದು ಇಂತಿಷ್ಟು ಅಂತ ಹಣ ಕೊಟ್ಟು ಬಿಡಿಸಿಕೊಂಡು ಹೋಗುತ್ತಾರೆ. ಗುಲಾಬಿಗೆ ಯಾವತ್ತೂ ಬೇಡಿಕೆ. ಒಂದು ಹೂವಿಗೆ 2 ರೂ.ನಂತೆ ಕೊಟ್ಟರೂ ಒಳ್ಳೆಯ ಲಾಭ. ಹಬ್ಬದ ದಿನ 5 ರೂ.ಗೆ ಮಾರಿದರಾಯ್ತು! ನೀವಿಲ್ಲದಿದ್ದಾಗ ಅಮ್ಮ ಕೊಡ್ತಾಳೆ. ಸಪೋಟಾ, ಸೀಬೆ, ನೆಲ್ಲಿಕಾಯಿ, ನೇರಳೆ ಹಣ್ಣಿನ ಮರ ಬೆಳೆಸಿ. ಪಕ್ಷಿಗಳ ಹಸಿವು ತಣಿಸುವ ಜತೆಗೆ ನಿಮಗೂ ತಿನ್ನಲು ಹಣ್ಣು ಸಿಗುತ್ತೆ. ಹೆಚ್ಚಿದ್ದರೆ ಮಾರಾಟ ಮಾಡುವುದಕ್ಕೂ ಅನುಕೂಲ.

ರಂಗೋಲಿ, ಚಿತ್ತಾರ ಬಿಡಿಸಿ

ಶಾಲೆ, ಟ್ಯೂಷನ್, ಹೋಂ ವರ್ಕ್, ಡಾನ್ಸ್-ಸಂಗೀತ ಕ್ಲಾಸ್, ಸ್ಪೋರ್ಟ್​ನಲ್ಲೇ ಬಿಜಿಯಾಗಿಬಿಡುವ ಬಹುತೇಕ ಮಕ್ಕಳಿಗೆ ರಂಗೋಲಿ ಎಂದರೆ ಏನೆಂದೇ ಗೊತ್ತಿರಲಿಕ್ಕಿಲ್ಲ. ನಗರಗಳಲ್ಲಿ ಕೆಲವೆಡೆ ನಿತ್ಯ ಮನೆ ಮುಂದೆ, ಸಮಾರಂಭದಲ್ಲಿ ರಂಗೋಲಿ ಹಾಕಲು ಕೆಲಸದವರನ್ನೂ ಇಟ್ಟುಕೊಂಡ ಉದಾಹರಣೆಗಳಿವೆ. ಮಕ್ಕಳೇ ನಿಮಗೆ ಮನೆ ಮುಂದೆ ಜಾಗ ಇಲ್ಲವಾದಲ್ಲಿ ಮನೆಯೊಳಗೆ, ಟೆರೇಸ್ ಮೇಲೆ ರಂಗೋಲಿ ಚಿತ್ತಾರ ಬಿಡಿಸಿ ನೋಡಿ. ಫೋಟೋ ಕ್ಲಿಕ್ಕಿಸಿ ನೆನಪಿನ ಬುತ್ತಿಗೆ ಸೇರಿಸಿಕೊಳ್ಳಿ. ನಿಶ್ಚಿತಾರ್ಥ, ಮದುವೆ, ಹಬ್ಬ ಬಂತೆಂದರೆ ಮೆಹಂದಿ ಇರಲೇ ಬೇಕು. ಮೆಹಂದಿ ಬಿಡಿಸುವುದನ್ನೇ ಹಲವರು ದುಡಿಮೆಯ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಮೆಹಂದಿ ಪುಸ್ತಕ ಸಿಗುತ್ತೆ. ಆನ್​ಲೈನ್​ನಲ್ಲೂ ವಿಡಿಯೋ ಸಿಗುತ್ತೆ. ನೋಡಿ ಕಲಿಯಿರಿ.

ಸಾಕುಪ್ರಾಣಿಯೂ ಲಾಭದಾಯಕ

ನಿಮ್ಮ ಮನೆಯಲ್ಲಿ ಅವಕಾಶ ಇದ್ದರೆ ಕುರಿ, ಮೇಕೆ, ಕೋಳಿ ಸಾಕಿ. ಮನೆಯ ಹಣಕಾಸಿಗೆ ನೆರವಾಗುತ್ತದೆ. ಶಾಲೆ ಬಿಟ್ಟು ಅದನ್ನೆಲ್ಲ ಮಾಡಬೇಕಿಲ್ಲ. ಅಪ್ಪ-ಅಮ್ಮ- ಅಜ್ಜಿ ತೋಟಕ್ಕೆ ಹೋದಾಗ ಸೊಪ್ಪು-ಹುಲ್ಲು ತರ್ತಾರೆ. ನೀವು ಬಿಡುವಿದ್ದಾಗ ಅದನ್ನು ಕಟ್ಟಿ, ನೀರು ಕುಡಿಸಿ. ರಜೆ ಇದ್ದಾಗ ಆಟವಾಡುತ್ತಲೇ ಅವುಗಳನ್ನು ನೋಡಿಕೊಳ್ಳಿ. ಅವು ಕೋಟ್ಯಂತರ ಜನರ ಜೀವನಾಧಾರ. ನಾಟಿ ಕೋಳಿ ಮೊಟ್ಟೆಗೆ ಭಾರಿ ಡಿಮಾಂಡ್ ಇದೆ. ನಿಮ್ಮೂರಲ್ಲೇ ಇರುವ ಮೇಕೆ, ಕೋಳಿ ಫಾಮರ್್​ಗಳಿಗೂ ಅಪ್ಪನೊಂದಿಗೆ ಭೇಟಿ ಕೊಡಿ. ಕೃಷಿ, ಹೈನುಗಾರಿಕೆ ಬಗ್ಗೆಯೂ ತಿಳಿದುಕೊಳ್ಳಿ.

ಕಸುಬು ಕಲಿಸುವ ಕಸೂತಿ

ಹೆಣ್ಣು ಮಕ್ಕಳಿಗೂ ಕಸೂತಿ ಕಲೆಗೂ ಅವಿನಾಭಾವ ನಂಟು. ಕಸೂತಿ ಕೆಲಸದಲ್ಲೇ ಬದುಕು ರೂಪಿಸಿಕೊಂಡ ಗಂಡು ಮಕ್ಕಳ ಸಂಖ್ಯೆಗೇನೂ ಕೊರತೆ ಇಲ್ಲ. ಕೆಲ ಶಾಲೆಗಳಲ್ಲಿ ಎಂಬ್ರಾಯಿಡರಿ ಬಗ್ಗೆಯೂ ಹೇಳಿ ಕೊಡಲಾಗುತ್ತಿದೆ. ಮಕ್ಕಳೇ ನಿಮ್ಮ ಕರವಸ್ತ್ರ, ಅಂಗಿಯ ಜೇಬಿಗೊಂದು ಚಂದದ ಚಿತ್ತಾರ, ಹೆಣ್ಮಕ್ಕಳ ದಾವಣಿ ಅಂಚಿಗೂ ಎಂಬ್ರಾಯಿಡರಿ ಮಾಡಬಹುದು. ಕಸೂತಿ ಕಲೆಗಳ ಬಗ್ಗೆ ಇಂಟರ್​ನೆಟ್ ಮೂಲಕವೇ ತಿಳಿದುಕೊಳ್ಳಬಹುದು. ಅಮ್ಮನೋ, ಪಕ್ಕದ ಮನೆ ಆಂಟಿಯೋ ಟೈಲರಿಂಗ್ ಮಾಡುವಾಗ ಕೂತು ಗಮನಿಸಿ. ಮಣಿ, ದಾರ, ತಂತಿ, ಬಣ್ಣದ ಕಾಗದ... ಇತ್ಯಾದಿ ಬಳಸಿ ಬಳೆ, ಸರ, ಕಿವಿಯೋಲೆ ತಯಾರಿಸಿ ಸೋದರ-ಸೋದರಿಯರಿಗೆ ಉಡುಗೊರೆ ಕೊಡಿ. ಹೇಗಿದ್ದರೂ ಶಾಲೆಗೆ ರಜೆ ಇದೆ. ಕರೊನಾ ಅಂತ ಮನೆಯಲ್ಲೇ ಇದ್ದೀರಿ. ಇದು ಒಳ್ಳೆಯ ಅವಕಾಶ. ಸ್ವೆಟರ್, ಬ್ಯಾಗ್, ಕೈ ಚೀಲ ಹೆಣೆಯೋದನ್ನೂ ಕಲಿಯಬಹುದು.

ಸೈಕಲ್ ಕೈಕೊಟ್ಟೀತೆಂಬ ಚಿಂತೆ ಬಿಡಿ

ಗ್ಯಾರೇಜ್​ಗಳಲ್ಲಿ ನೀವು ಕೆಲಸ ಮಾಡಬೇಕು ಅಂತೇನಿಲ್ಲ... ಆದರೆ ಅಲ್ಲಿ ನಡೆಯುವ ಕೆಲಸಗಳ ಬಗ್ಗೆ ಸಾಧ್ಯವಾದರೆ ಅಪ್ಪನ ಜತೆಯಲ್ಲೊಮ್ಮೆ ಭೇಟಿ ಕೊಟ್ಟು ಗಮನಿಸಿ. ಅವರ ಚಾಕಚಕ್ಯತೆ, ಕಷ್ಟ ಎಲ್ಲವೂ ಅರಿವಾಗುತ್ತದೆ. ಮುಂದೆ ಯಾವತ್ತಾದರೂ ನಿಮ್ಮ ಸೈಕಲ್ಲು, ಬೈಕು, ಕಾರು ಕೈ ಕೊಟ್ಟಾಗ ಈಗ ಕಲಿತ ವಿದ್ಯೆ ನೆರವಿಗೆ ಬರುತ್ತದೆ. ಮಕ್ಕಳಿರುವ ಮನೆಯಲ್ಲಿ ಸಾಮಾನ್ಯವಾಗಿ ಸೈಕಲ್ ಇದ್ದೇ ಇರುತ್ತೆ. ಪಂಕ್ಚರ್ ಆದ್ರೆ, ಚೈನ್ ಕಳಚಿದರೆ, ಟೈರಿನ ಗಾಳಿ ಹೋದರೆ ನೀವೇ ಸರಿಪಡಿಸಿಕೊಳ್ಳುವಷ್ಟಾದರೂ ಕಲಿತಿರಬೇಕಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net