ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅಪ್ರಾಪ್ತ ವಯಸ್ಕಳ ಮುಖಕ್ಕೇ ಆ್ಯಸಿಡ್ ಎರಚಿದ!; ಆರೋಪಿ ಪರಾರಿ

Police
Published on

ರಾಮನಗರ: ಪ್ರೀತಿಯನ್ನು ನಿರಾಕರಿಸಿದ್ದ ಅಪ್ರಾಪ್ತ ವಯಸ್ಕಳ ಮುಖದ ಮೇಲೆ ಯುವಕನೊಬ್ಬ ಆ್ಯಸಿಡ್ ಎರಚಿ ಗಾಯಗೊಳಿಸಿ ಪರಾರಿಯಾದ ಪ್ರಸಂಗ ನಡೆದಿದೆ. ರಾಮನಗರ ಜಿಲ್ಲೆಯಲ್ಲಿ ಇಂದು ಈ ಪ್ರಕರಣ ನಡೆದಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನಕಪುರದ ಕುರುಪೇಟೆ ನಿವಾಸಿ ಸುಮಂತ್ ಅಲಿಯಾಸ್ ಅಪ್ಪು ಎಂಬಾತನಿಂದ ಆ್ಯಸಿಡ್ ದಾಳಿ ನಡೆದಿದೆ. ಕನಕಪುರ ಬೈಪಾಸ್​ ರಸ್ತೆಯ ನಾರಾಯಣಪ್ಪ ಕೆರೆ ಬಳಿ ಈ ಘಟನೆ ನಡೆದಿದೆ. ಈತ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ 17 ವರ್ಷದ ಹುಡುಗಿ ಮುಖಕ್ಕೆ ಆ್ಯಸಿಡ್ ಎರಚಿದ್ದಾನೆ.

ಆ್ಯಸಿಡ್ ದಾಳಿಯಿಂದಾಗಿ ಯುವತಿಯ ಮುಖ ಹಾಗೂ ಎಡಗಣ್ಣು ಗಾಯಗೊಂಡಿದೆ. ತೀವ್ರ ಆಘಾತಕ್ಕೆ ಒಳಗಾದ ಈಕೆಯನ್ನು ಕೂಡಲೇ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅಲ್ಲಿಂದ ಬಳಿಕ ಬೆಂಗಳೂರಿನ ನಿಮ್ಹಾನ್ಸ್​ಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಬೈಕ್​ನಲ್ಲಿ ಬಂದು ಆ್ಯಸಿಡ್ ಹಾಕಿರುವ ಆರೋಪಿ ಪರಾರಿಯಾಗಿದ್ದು, ಆತನ ವಿರುದ್ಧ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net