

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಏ. 2ರಂದು ನಡೆಯಲಿದ್ದು, ಇದರ ನಿಮಿತ್ತ ಮಾ. 21ರಿಂದ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ನಡೆಯಲಿದೆ.
ಮಾ. 21ರಂದು ಸಂಜೆ 6.30ಕ್ಕೆ ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಪುರಾಣ ಪ್ರವಚನ ಉದ್ಘಾಟಿಸುವರು. ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಉಪದೇಶಾಮೃತ ನೀಡುವರು. ಶ್ರೀ ಶ್ರೀಧರ ಶಾಸ್ತ್ರೀಜಿ ಪುರಾಣ ಪ್ರವಚನ ನೀಡುವರು. ವೀರೇಶಕುಮಾರ ಮಳಲಿ ಸಂಗೀತ ಪ್ರಸ್ತುತಪಡಿಸುವರು.
ಏ. 1ರಂದು ಸಂಜೆ 6.30ಕ್ಕೆ ಜನಜಾಗೃತಿ ಧರ್ಮ ಚಿಂತನ ಸಮಾವೇಶವನ್ನು ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸುವರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಇತರರು ಪಾಲ್ಗೊಳ್ಳುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಮುಖಂಡರಾದ ತವನಪ್ಪ ಅಷ್ಟಗಿ, ಗುರುರಾಜ ಹುಣಸೀಮಠದ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಮಂಜುನಾಥ ಮಕ್ಕಳಗೇರಿ, ನೀಲವ್ವ ತಿದಿ, ವಿಠ್ಠಲ ಭೋವಿ ಆಗಮಿಸುವರು.
ಜಾತ್ರೆ ನಿಮಿತ್ತ ಏ. 1ರಂದು ಪ್ರಾತಃ ಕಾಲದಲ್ಲಿ ಶ್ರೀ ವೀರಭದ್ರ ದೇವರ ಸಾಮೂಹಿಕ ಗುಗ್ಗಳ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಪಾದಪೂಜೆ ಜರುಗಲಿದೆ. ಅಮ್ಮಿನಬಾವಿಯ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡುವರು.
ಏ. 2ರಂದು ಸಂಜೆ 5 ಗಂಟೆಗೆ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ನಡೆಯಲಿದ್ದು, ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಏ. 2ರಂದು ಪ್ರಾತಃಕಾಲದಲ್ಲಿ ವೀರಶೈವ ಜಂಗಮ ವಟುಗಳಿಗೆ ಅಯ್ಯಾಚಾರದ ದೀಕ್ಷಾ ಕಾರ್ಯಕ್ರಮ, ಏ. 3ರಂದು ಬೆಳಗ್ಗೆ 10 ಗಂಟೆಗೆ ಕಡುಬಿನ ಕಾಳಗ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.