

ಬೆಂಗಳೂರು: ಉತ್ತರ ಕರ್ನಾಟಕ ಜನರ ಬದುಕಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಇತ್ತೀಚೆಗೆ ಎರಡು ಸಿನಿಮಾಗಳು ಗಮನಸೆಳೆದಿದ್ದವು. ಅವೇ ‘ಶಿವಮ್ಮ’ ಹಾಗೂ ‘ಫೋಟೋ’. ಈಗ ಇದೇ ಹಾದಿಯಲ್ಲಿ ಮತ್ತೊಂದು ಸಿನಿಮಾ ಮೂಡಿಬರುತ್ತಿದೆ. ಅದೇ ‘ಪಪ್ಪಿ’. ಜವಾರಿ ಮಂದಿಯ ಬದುಕು, ಬವಣೆ, ನಲಿವು-ನೋವುಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ 15 ವರ್ಷಗಳ ವಿವಿಧ ವಿಭಾಗದಲ್ಲಿ ಕೆಲಸ ಮಾಡಿರುವ ಜತೆಗೆ ‘ಫಸ್ಟ್ ಲವ್’ ಎಂಬ ಸಿನಿಮಾ ನಿರ್ದೇಶಿಸಿದ್ದ ಆಯುಷ್ ಮಲ್ಲಿ ‘ಪಪ್ಪಿ’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ‘ಕಾಲ ಕೆಟ್ಟೈತಂತ’ ಸಾಂಗ್ ರಿಲೀಸ್ ಆಗಿದ್ದು, ಇದೇ ಮೇ 1ರಂದು ಸಿನಿಮಾ ತೆರೆಗೆ ಬರಲಿದೆ. ಈ ಜವಾರಿ ತಂಡದ ಜತೆ ಇದೀಗ ನಟ ಧ್ರುವ ಸರ್ಜಾ ಜತೆಯಾಗಿದ್ದು, ‘‘ಪಪ್ಪಿ’ ಚಿತ್ರವನ್ನು ನಾನು ನೋಡಿದ್ದೇನೆ. ಎಲ್ಲ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ‘ತಿಥಿ’ ಚಿತ್ರದ ವೈಬ್ ಇಲ್ಲೂ ಕಾಣಬಹುದು. ಚಿತ್ರದ ಭಾವನೆಗಳು ಹಾಗೂ ಸೂಕ್ಷ್ಮ ಅಂಶಗಳು ಎಲ್ಲರಿಗೂ ಕನೆಕ್ಟ್ ಆಗುತ್ತವೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕಿದೆ. ಹೀಗಾಗಿ ಈ ಚಿತ್ರವನ್ನು ನಾನು ಪ್ರಸ್ತುತಪಡಿಸುತ್ತಿದ್ದೇನೆ’ ಎಂದರು.
ಆಯುಷ್ ಮಲ್ಲಿ, ‘ಟ್ರೇಲರ್ ಬಿಡುಗಡೆಯಾದ ಮರುದಿನವೇ ಧ್ರುವ ಅವರಿಂದ ಕರೆ ಮಾಡಿ ಬೆಂಬಲಿಸಿದರು. ನಮ್ಮ ಚಿತ್ರಕ್ಕೆ ಇಡೀ ಇಂಡಸ್ಟ್ರಿ ಪ್ರೋತ್ಸಾಹ ನೀಡುತ್ತಿರುವುದು ಖುಷಿ ನೀಡಿದೆ. ‘ಶ್ರೀಮಂತನ ನಾಯಿ ಹಾಗೂ ಬಡವನ ಪ್ರೀತಿ’ ಇದು ಚಿತ್ರದ ಮುಖ್ಯ ಅಂಶ. ಟಾಲಿವುಡ್ ನಟ ರಾಣಾ ದಗ್ಗುಬಾಟಿ ಕೂಡ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ತೆಲುಗು ರೈಟ್ಸ್ ಖರೀದಿಸುವ ಆಸಕ್ತಿ ತೋರಿದ್ದು, ಮಾತುಕತೆ ಹಂತದಲ್ಲಿದೆ’ ಎಂದು ಮಾಹಿತಿ ನೀಡುತ್ತಾರೆ. ಚಿತ್ರದಲ್ಲಿ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದ್ರುಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಕಲಾಬಳಗದಲ್ಲಿದ್ದಾರೆ.