VIDEO: ಜೆರ್ಸಿಯಲ್ಲೂ ಬದಲಾವಣೆ ಮಾಡಿಕೊಂಡ ಪಂಜಾಬ್ ಕಿಂಗ್ಸ್

punjab kings for web
Published on

ಮುಂಬೈ: ಪಂಜಾಬ್ ಕಿಂಗ್ಸ್ ಎಲ್ಲ ತಂಡಗಳಿಗಿಂತ ವಿಭಿನ್ನವಾಗಿ ಈ ಬಾರಿಯ ಐಪಿಎಲ್‌ಗೆ ಸಜ್ಜಾಗುತ್ತಿದೆ. ಕಳೆದ 13 ಆವೃತ್ತಿಗಳಲ್ಲಿ ಕೇವಲ ಒಮ್ಮೆ ಮಾತ್ರ ಫೈನಲ್ ಪ್ರವೇಶಿಸಿರುವ ಪಂಜಾಬ್ ತಂಡ, ಈ ಬಾರಿ ಶತಾಯಗತಾಯ ಪ್ರಶಸ್ತಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಿಂದ ಪಂಜಾಬ್ ಕಿಂಗ್ಸ್ ಎಂದು ಈಗಾಗಲೇ ತಂಡದ ಹೆಸರನ್ನು ಮರುನಾಮಕರಣ ಮಾಡಿಕೊಂಡಿದೆ. ಅಲ್ಲದೆ, ತಂಡದ ಲೋಗೋ ಕೂಡ ಬದಲಿಸಿ ಕೊಂಡಿರುವ ಪಂಜಾಬ್ ಕಿಂಗ್ಸ್, ಇದೀಗ ಜೆರ್ಸಿಯಲ್ಲೂ ಕೆಲವೊಂದು ಬದಲಾವಣೆ ಮಾಡಿಕೊಂಡಿದೆ. ಕನ್ನಡಿಗರಾದ ಅನಿಲ್ ಕುಂಬ್ಳೆ ತಂಡದ ಮುಖ್ಯಕೋಚ್ ಆಗಿದ್ದರೆ, ಕೆಎಲ್ ರಾಹುಲ್ ನಾಯಕನಾಗಿದ್ದಾರೆ.

ಸಾಕಷ್ಟು ಬದಲಾವಣೆ ಮಾಡಿಕೊಂಡಿರುವ ಪಂಜಾಬ್ ಸಂಪೂರ್ಣ ಹೊಸ ತಂಡವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಮಂಗಳವಾರ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಲೋಗೋದಲ್ಲಿ ಘರ್ಜಿಸುವ ಸಿಂಹವಿದ್ದು, ಜೆರ್ಸಿ ಮೇಲ್ಬಾಗದಲ್ಲಿ ಹಾಕಲಾಗಿದೆ. ಹಳೇ ಲೋಗೋದಲ್ಲಿ ಎರಡು ಹುಲಿಗಳಿದ್ದವು. ಹಳೇ ಜೆರ್ಸಿ ಮೇಲೆ ಎರಡೂ ನೀಲಿ ಗೆರೆಗಳಿದ್ದರೆ, ಈ ಬಾರಿ ತೆಗೆಯಲಾಗಿದೆ. ಬಹುತೇಕ ಹೊಸತನಗಳಿಂದ ಕೂಡಿರುವ ಪಂಜಾಬ್ ತಂಡ, ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದೆ. 2014ರಲ್ಲಿ ಫೈನಲ್ ಪ್ರವೇಶಿಸಿದ ಬಳಿಕ ಪಂಜಾಬ್ ತಂಡ ಇದುವರೆಗೂ ಪ್ಲೇಆಫ್ ಪ್ರವೇಶಿಸಿಲ್ಲ. ಕಳೆದ ಬಾರಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಪಂಜಾಬ್ ತಂಡ ಏಪ್ರಿಲ್ 12 ರಿಂದ ಐಪಿಎಲ್ ಅಭಿಯಾನ ಆರಂಭಿಸಲಿದ್ದು, ರಾಜಸ್ಥಾನ ರಾಯಲ್ಸ್ ತಂಡ ಮೊದಲ ಎದುರಾಳಿಯಾಗಿದೆ. ಏಪ್ರಿಲ್ 9 ರಂದು ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹಾಗೂ ಆರ್‌ಸಿಬಿ ತಂಡಗಳು ಎದುರಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net