

ಪಂಚಾಬ್: ತಮ್ಮ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆ ಡಿಸೆಂಬರ್ 1, 2023ರಿಂದ ಜಾರಿಗೆ ಬರುವಂತೆ 4% ತುಟ್ಟಿಭತ್ಯೆ (DA) ನೀಡಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ (ಡಿ.18) ಅನುಮೋದನೆ ನೀಡಿದ್ದಾರೆ. ಈ ಮೂಲಕ ಅದನ್ನು 34-38%ಕ್ಕೆ ಏರಿಕೆ ಮಾಡಿದ್ದಾರೆ.
ಇಲ್ಲಿನ ನೌಕರರ ಮುಖಂಡರ ಜತೆ ಸಭೆ ನಡೆಸಿದ ಸಿಎಂ ಮಾನ್, ಕಳೆದ 40 ದಿನಗಳಿಂದ ನೌಕರರು ಪೆನ್ ಡೌನ್ ಮುಷ್ಕರ ನಡೆಸುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ, ಸಾರಿಗೆ, ಸಾರ್ವಜನಿಕ ಆರೋಗ್ಯ, ಕೃಷಿ ಸೇರಿದಂತೆ 43ಕ್ಕೂ ಹೆಚ್ಚು ಪ್ರಮುಖ ಇಲಾಖೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದ ಬೆನ್ನಲ್ಲೇ ಇದೀಗ ಜಾರಿಗೊಳಿಸಲು ಸೂಚಿಸಿದ್ದಾರೆ.
ಒಪಿಎಸ್ ಜಾರಿಗೆ ನೌಕರರ ಆಗ್ರಹ: ಹಳೆಯ ಪಿಂಚಣಿ ಯೋಜನೆ (OPS) ಜಾರಿ, ಬಾಕಿ ಇರುವ ಶೇ.12 ತುಟ್ಟಿಭತ್ಯೆ ಬಿಡುಗಡೆ, ಗುತ್ತಿಗೆ ನೌಕರರ ಸೇವೆ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಕಳೆದ ನವೆಂಬರ್ 8 ರಂದು ಆರಂಭಿಸಿದ್ದ ಮುಷ್ಕರವನ್ನು ಭಾನುವಾರವೇ ಸ್ಥಗಿತಗೊಳಿಸಿದರು.
ಎಲ್ಲಾ ಇಲಾಖೆಗಳ ಸಚಿವರ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಖಚಿತಪಡಿಸಿಕೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಖಚಿತವಾದ ವೃತ್ತಿ ಪ್ರಗತಿ (ಎಸಿಪಿ) ಯೋಜನೆ ಮತ್ತು ಇತರೆಗಳನ್ನು ಮರುಸ್ಥಾಪಿಸುವುದು ಸೇರಿದಂತೆ ನೌಕರರ ವಿವಿಧ ಬಾಕಿ ಇರುವ ಬೇಡಿಕೆಗಳ ಪರಿಹಾರಕ್ಕಾಗಿ ಸಮಿತಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು,(ಏಜೆನ್ಸೀಸ್).