ಪಂಪ್ ಕಳ್ಳತನ ಮುಚ್ಚಿ ಹಾಕಿದ ಆರೋಪ - ವರ್ಕ್‌ಶಾಪ್‌ 2 ಲ. ರೂ. ಸ್ವತ್ತು ಕಳವಾದ ಪ್ರಕರಣ

WhatsApp Image 2024-07-24 at 18.20.33_5d24607d
Published on

ಪುತ್ತೂರು: ಪುಣಚ ಗುರ್ಮೆಯ ಮನೆಯಂಗಳದಲ್ಲಿ ವಿದ್ಯುತ್ ಪಂಪ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಪಂಪ್‌ಸೆಟ್‌ಗಳು ಕಳವಾಗಿದ್ದು, ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಬದಲು ಎನ್‌ಸಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಗುರ್ಮೆ ನಿವಾಸಿ ಗಣೇಶ್ ಗೌಡ ಎಂಬುವರು ವಿದ್ಯುತ್ ಉಪಕರಣಗಳ ದುರಸ್ತಿ ಕಾರ್ಯ ನಡೆಸುತ್ತಿದ್ದು, ಸುಮಾರು ೨ ಲಕ್ಷ ರೂ.ಮೌಲ್ಯದ ವಿದ್ಯುತ್ ಉಪಕರಣಗಳು ಕಳ್ಳತನವಾಗಿವೆ. ಜು.೨೧ರ ರಾತ್ರಿ ಕಳ್ಳತನ ನಡೆದಿದ್ದು, ಜು.೨೨ರ ಬೆಳಗ್ಗೆ ಕಾಣೆಯಾಗಿರುವುದು ಪತ್ತೆಯಾಗಿದೆ. ಮನೆಯ ಆವರಣದಲ್ಲಿರುವ ಗೇಟಿಗೆ ಬೀಗ ಹಾಕಿದ್ದು, ಆವರಣ ಗೋಡೆಯನ್ನು ಹಾರಿ ಒಳ ನುಸುಳಿರುವ ಸಾಧ್ಯತೆಯಿದೆ.

ಪಂಚಾಯಿತಿಗೆ ಸೇರಿದ ೭.೫ ಎಚ್‌ಪಿ ಪಂಪ್, ಗ್ರಾಹಕರಿಂದ ದುರಸ್ತಿಗಾಗಿ ಬಂದ ೫ ಎಚ್‌ಪಿ ೧೦ ಸ್ಟೇಜ್, ೫ ಎಚ್‌ಪಿ ೮ ಸ್ಟೇಜ್, ೫ ಎಚ್‌ಪಿ ೧೦ ಸ್ಟೇಜ್, ೩ ಎಚ್‌ಪಿಯ ತಲಾ ಒಂದು ಪಂಪ್, ೧.೫ ಎಚ್‌ಪಿ ನಾಲ್ಕು ಪಂಪ್, ತೆರೆದ ಬಾವಿಯ ಮೂರು ಪಂಪ್, ಹಾಳಾದ ೪ ಮೋಟಾರು ಕಳವಾಗಿದೆ. ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸುವ ಬದಲಾಗಿ ಠಾಣೆಯಲ್ಲಿ ಇಬ್ಬರು ಪೊಲೀಸ್ ಮಾತ್ರ ಇರುವುದು ಎಂದು ಹೇಳಿಕೊಂಡು ಎನ್‌ಸಿ ಮಾಡಿದ್ದಾರೆ.


ಬೃಹತ್ ಪ್ರಮಾಣದಲ್ಲಿ ಕಳ್ಳತನ ನಡೆದರೂ, ತನಿಖೆಗೆ ಮುಂದಾಗಿಲ್ಲ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿಲ್ಲ. ಪ್ರಕರಣವನ್ನು ಮುಚ್ಚಿ ಕಳ್ಳರಿಗೆ ಸಹಕಾರಿಯಾಗುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net