

ವಿಟ್ಲ: ಶಾಲೆಗಳಿಗೆ ಸಮವಸ್ತ್ರಗಳನ್ನು ವಿತರಿಸದೆ, ಶಿಕ್ಷಕರನ್ನೇ ತಾಲೂಕು ಕೇಂದ್ರಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಸೌರದೀಪಗಳನ್ನು ಅಳವಡಿಸಿದವರು ನಿಗದಿತ ಸಮಯದವರೆಗೆ ನಿರ್ವಹಣೆ ಸರಿಯಾಗಿ ನಡೆಸುತ್ತಿಲ್ಲ. ವರದಿಯಲ್ಲಿ ದುರಸ್ತಿ ಎಂದು ಹೊಸ ಕಂಪ್ಯೂಟರ್ ಖರೀದಿಸಿದ ಕ್ರಮ ಸರಿಯಲ್ಲ. ವಾರ್ಡ್ ಸಭೆಯಲ್ಲಿ ೪ ವರ್ಷಗಳಿಂದ ಬರುತ್ತಿರುವ ಕಾಮಗಾರಿಗಳ ಬೇಡಿಕೆ ಮತ್ತೆ ಮತ್ತೆ ಬರುತ್ತಿದೆ. ಇದು ಪುಣಚ ಗ್ರಾಮ ಪಂಚಾಯಿತಿ ೨೦೨೪-೨೦೨೫ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿ ಬಂದ ಮಾತು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಕಳೆದ ಮಳೆಗಾಲದಲ್ಲಿ ಬಡೆಕ್ಕನಡ್ಕ ನಿವಾಸಿ ಚೋಮು ಎಂಬವರ ಮನೆಗೆ ಹಾನಿಯಾಗಿದ್ದು, ಪರಿಹಾರದ ಹಣ ಇನ್ನೂ ನೀಡಿಲ್ಲ. ಸುಮಾರು ೧.೫ಲಕ್ಷ ರೂ. ಬಂದಿದೆ ಎಂದು ಹೇಳಲಾಗುತ್ತಿದೆ ಹೊರತು ಹಣ ನೀಡಿಲ್ಲ. ಕೆಲವೇ ಸಮಯದಲ್ಲಿ ಮಳೆಗಾಲ ಬರಲಿದ್ದು, ದುರಸ್ತಿ ಮಾಡದೆ ಅವರು ಮನೆಯಲ್ಲಿ ವಾಸ ಮಾಡುವುದಾದರೂ ಹೇಗೆ? ಬಡವರ ಕುರಿತು ಇಂತಹ ನಿರ್ಲಕ್ಷ್ಯ ಯಾಕೆ ಎಂದು ಪ್ರಶ್ನಿಸಿದರು.
ಗ್ರಾಮಸಭೆಯ ಬಗ್ಗೆ ಸರಿಯಾದ ರೀತಿಯಲ್ಲಿ ಪ್ರಚಾರ ಕೈಗೊಳ್ಳದೆ ಜನರು ಆಗಮಿಸಿಲ್ಲ. ಕೇವಲ ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತರು ಮತ್ತು ಅಽಕಾರಿಗಳನ್ನು ಕೂರಿಸಿಕೊಂಡು ಸಭೆ ಮಾಡುವ ಉದ್ದೇಶವೇನು. ಗ್ರಾಮಸ್ಥರ ಸರಿಯಾದ ಕೋರಂ ಬಾರದೆ ಸಭೆಯನ್ನು ನಡೆಸಬಾರದು ಎಂದು ಸುಮಾರು ಅರ್ಧ ತಾಸು ಸಭೆಯನ್ನು ತಡೆಹಿಡಿಯುವ ಕಾರ್ಯ ಮಾಡಲಾಯಿತು. ಸಭೆಗೆ ತಡವಾಗಿ ಬಂದ ಅಽಕಾರಿಗಳಿಗೆ ಅರ್ಧದಿನದ ವೇತನವನ್ನು ನೀಡಬಾರದು ಎಂದು ಆಗ್ರಹಿಸಿದರು.
ಆರೋಗ್ಯ ಇಲಾಖೆಯ ಸುತ್ತೋಲೆಯ ಪ್ರಕಾರ ಮಕ್ಕಳು ಬಿಸಿಲಿಗೆ ಓಡಾಟ ಮಾಡಬಾರದು, ಆದರೆ ಮಧ್ಯಾಹ್ನ ಮಕ್ಕಳು ಬಿಸಿಲಿಗೆ ಓಡಾಡುತ್ತಿದ್ದಾರೆ. ಮಕ್ಕಳನ್ನು ಶಾಲೆಯಿಂದ ಬಿಸಿಲಿನ ಸಮಯವೇ ಬಿಡುತ್ತಿರುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದ ಪ್ರಕಾರ ವಿದ್ಯಾರ್ಥಿವೇತನ ನೀಡಬೇಕು. ಎರಡು ವರ್ಷದ ಹಿಂದೆ ಮುಖ್ಯಶಿಕ್ಷಕರು ಅಗತ್ಯ ದಾಖಲೆ ಪಡೆದುಕೊಳ್ಳುತ್ತಿದ್ದರು. ಸದ್ಯ ವಿದ್ಯಾರ್ಥಿವೇತನಕ್ಕೆ ವಿದ್ಯಾರ್ಥಿಗಳು ಅರ್ಜಿ ಹಾಕಿದರೂ, ಬರುತ್ತಿಲ್ಲ ಇದರ ಕಾರಣವನ್ನು ತಿಳಿಸಬೇಕು ಶಿಕ್ಷಣಪ್ರೇಮಿ ಬೇಡಿಯಿಟ್ಟರು.
ಸಭೆಯ ಮಾರ್ಗದರ್ಶಿ ಅಽಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಭಾಗವಹಿಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಯಾನೆ ಬೇಬಿ ವಹಿಸಿದ್ದರು. ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಸದಸ್ಯರು ಭಾಗವಹಿಸಿದರು.
೨೦ ಸಾವಿರದಲ್ಲಿ ವಿತರಣೆ ಅಸಾಧ್ಯ
ಸಮವಸ್ತ್ರ ವಿತರಣೆ ವಿಚಾರದಲ್ಲಿ ಶಿಕ್ಷಕರನ್ನು ತಾಲೂಕು ಕೇಂದ್ರಕ್ಕೆ ಕರೆಸಿಕೊಳ್ಳುವ ಉದ್ದೇಶವೇನು? ಶಾಲೆಗಳಿಗೆ ಸಮವಸ್ತ್ರವನ್ನು ತಲುಪಿಸಬೇಕೆಂಬ ಸ್ಪಷ್ಟ ಆದೇಶವಿದ್ದರೂ ಯಾಕೆ ಜಾರಿ ಗೊಳಿಸುತ್ತಿಲ್ಲ ಎಂಬ ಪ್ರಶ್ನೆಗೆ ಸಿ.ಆರ್.ಪಿ. ಪುಷ್ಪಾ ಬಲ್ಲಾಳ್ ಸಮವಸ್ತ್ರಗಳನ್ನು ವಿತರಣೆಗೆ ಇಲಾಖೆಯಿಂದ ೨೦ ಸಾವಿರ ನೀಡಲಾಗುತ್ತಿದ್ದು, ಈ ಮೊತ್ತದಲ್ಲಿ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ತಲುಪಿಸುವುದು ಕಷ್ಟ ಎಂದರು. ಈ ಉತ್ತರ ನೀಡಲು ಕ್ಷೇತ್ರ ಶಿಕ್ಷಣಾಽಕಾರಿಗಳೇ ಬೇಕೆಂಬ ನಿಟ್ಟಿನಲ್ಲಿ ಸಭೆಗೆ ಕರೆಸಬೇಕೆಂದು ಪತ್ರ ನೀಡಲಾಗಿದೆ. ಸಮವಸ್ತ್ರ ವಿತರಣೆ ವಿಚಾರದಲ್ಲಿ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಯಿತು.
ಸೇವಾ ಪುಸ್ತಕದಲ್ಲಿ ದಾಖಲಿಸಬೇಕು
ಗ್ರಾಮಸಭೆಯ ದಿನ ನಿಗದಿಯಾಗಿರುವ ಮಾಹಿತಿಯಂತೆ ಮಾ.೧೪ರಂದು ಗ್ರಾಮಸ್ಥ ವೆಂಕಟ್ರಮಣ ೫ ಇಲಾಖೆಗಳ ತಾಲೂಕು ಮಟ್ಟದ ಅಽಕಾರಿಗಳು ಕಡ್ಡಾಯ ಹಾಜರಾತಿ ಇರಬೇಕೆಂದು ಹೆಸರು ಉಲ್ಲೇಖ ಮಾಡಿ ಬೇಡಿಕೆ ಸಲ್ಲಿಸಿದ್ದರು. ಸಭೆಗೆ ಶಿಕ್ಷಣ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್, ಪೊಲೀಸ್ ಇಲಾಖೆಯ ಸೂಚಿಸಿ ಅಽಕಾರಿಗಳ ಹಾಜರಾತಿ ಇಲ್ಲ. ಆಗಮಿಸದ ಅಽಕಾರಿಗಳ ಸೇವಾ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.