

ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನಾ ಯೋಧರ ಮೇಲೆ ಭಯೋತ್ಫಾದಕರು ನಡೆಸಿದ ದಾಳಿಯನ್ನು ಸಮರ್ಥಿಸಿಕೊಂಡು ಉಗ್ರರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಅಪರಾಧಿಗೆ ಎನ್ಐಎ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಫೈಜ್ ರಶೀದ್ ಶಿಕ್ಷೆಗೊಳಗಾದ ಅಪರಾಧಿ. 2019ರ ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರ ಸಂಘಟನೆ ಕಾರ್ಯಕರ್ತರು ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಹಲವು ಯೋಧರು ಹುತಾತ್ಮರಾಗಿದ್ದರು. ಇಡೀ ದೇಶ ಶೋಕಾಚರಣೆಯಲ್ಲಿತ್ತು. ಆದರೆ, ಬೆಂಗಳೂರಿನಲ್ಲಿ ಓದಿತ್ತಿದ್ದ ಫೈಜ್ ರಶೀದ್, ತನ್ನ ಫೇಸ್ಬುಕ್ ಖಾತೆಯಲ್ಲಿ ಉಗ್ರ ಸಂಘಟನೆ ಕೃತ್ಯವನ್ನು ಸಮರ್ಥಿಸಿಕೊಂಡಿದಲ್ಲದೆ, ದೇಶದ್ರೋಹಿ ಕಾಮೆಂಟ್ಗಳನ್ನು ಪೋಸ್ಟ್ ಮಾಡಿ ಕೋಮುಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿದ್ದ.
ಈ ಸಂಬಂಧ ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಆರೋಪಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಬಳಿಕ ಹೆಚ್ಚಿನ ತನಿಖೆ ನಡೆಸಿ ಆರೋಪಿಯ ಮೊಬೈಲ್ ವಶಪಡಿಸಿಕೊಂಡು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಈತನ ಮೊಬೈಲ್ನಲ್ಲಿ ಇನ್ನಷ್ಟು ದೇಶದ್ರೋಹ ಕಾಮೆಂಟ್ಗಳು ಪತ್ತೆಯಾಗಿತ್ತು. ಈತನ ವಿರುದ್ಧ ಆರೋಪ ಪಟ್ಟಿ ಕೂಡ ಸಲ್ಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ. ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟಲು ವಿಫಲನಾದರೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು. ಅಪರಾಧಿ ಫೈಜ್ ರಶೀದ್ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ 3ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ.
ಈ ಪ್ರಕರಣದಲ್ಲಿ ಎಸಿಪಿ ಪಿ.ಟಿ.ಸುಬ್ರಹ್ಮಣ್ಯ ಮತ್ತು ಎನ್.ಎಚ್.ರಾಮಚಂದ್ರಯ್ಯ ತನಿಖಾಧಿಕಾರಿಗಳಾಗಿದ್ದರು. ಸರ್ಕಾರದ ಪರವಾಗಿ ಅಭಿಯೋಜಕರಾಗಿ ಅರುಣ್ ಕುಮಾರ್ ವಾದ ಮಂಡಿಸಿದ್ದರು.