ಬಂಕಾಪುರ ದುರ್ಗಾದೇವಿ ದೇವಸ್ಥಾನದಲ್ಲಿ ಮಳೆಗಾಗಿ ಜೋಗಮ್ಮಗಳಿಂದ ಪೂಜೆ, ಪ್ರಾರ್ಥನೆ

Jogamma Prayer
Published on

ಬಂಕಾಪುರ: ಪಟ್ಟಣದ ಹೊಂಡದ ದುರ್ಗಾದೇವಿ ದೇವಸ್ಥಾನದಲ್ಲಿ ಸುಂಕದಕೇರಿ ಜೋಗಮ್ಮಗಳು ಗುರುವಾರ ವಿಶೇಷ ಪೂಜೆ, ಜೋಗತಿ ಪದಗಳ ಮೂಲಕ ದೇವರಲ್ಲಿ ಪ್ರಾರ್ಥಿಸಿದರು.

ಮಳೆಗಾಗಿ ಕಳೆದ 20 ದಿನದಿಂದ ತುಂಬಿದ ಕೊಡಗಳಿಗೆ ದೇವರ ಹೆಸರಿಟ್ಟು ಪ್ರತಿದಿನ ವಿಶಿಷ್ಟ ಪೂಜೆ ಸಲ್ಲಿಸುತ್ತಿದ್ದಾರೆ. ಗುಂಪು ಕಟ್ಟಿಕೊಂಡು ಗುರ್ಜಿ, ಗುರ್ಜಿ ಅಲ್ಯಾಡಿ ಬಂದೆ.. ಹಳ್ಳಕೊಳ್ಳ ಅಲೆದಾಡಿ ಬಂದೆ, ಬಾ ಮಳೆಯೇ.. ಕಾರ್ ಮಳೆಯೇ ಎಂದು ದೇವರನ್ನು ಪ್ರಾರ್ಥಿಸಿದರು. ರೈತರಲ್ಲಿ ದೇವರ ಮೊರೆ ಹೋಗುವಂತೆ ಹಾಡನಲ್ಲಿ ಪ್ರೇರೇಪಿಸುತ್ತಿದ್ದರು.

ರೈತರು ಸರದಿಯಂತೆ ದೇವಸ್ಥಾನಕ್ಕೆ ಬಂದು ಜೋಗಮ್ಮಗಳೊಂದಿಗೆ ಪ್ರಾರ್ಥಿಸುತ್ತಿದ್ದಾರೆ. ಮಳೆಗಾಗಿ ವ್ರತ ಕೈಗೊಂಡ ಜೋಗಮ್ಮಗಳಿಗೆ ಗುರುವಾರ ಅನ್ನ ಪ್ರಸಾದ ಸೇವೆ ಸಲ್ಲಿಸಿದ ಎಎಸ್​ಐ ಡಿ.ಎನ್. ಕೂಡಲ ಅವರು ಪ್ರಾರ್ಥನೆ ಸಲ್ಲಿಸಿದರು. ಪರಿಸರದಲ್ಲಾದ ಬದಲಾವಣೆಯಿಂದ ಮಳೆ ಬಾರದೇ ಎಲ್ಲರ ಬದುಕು ದುಸ್ತರವಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಅಂಗಳದಲ್ಲೊಂದು ಸಸಿ ನೆಟ್ಟು ಪರಿಸರ ಸಂರಕ್ಷಿಸುವ ಕೆಲಸವಾಗಬೇಕು ಎಂದರು.

ಜೋಗಮ್ಮಗಳಾದ ಬಸಮ್ಮ ಕೂಡಲ, ಸಿದ್ದವ್ವ ರಾಣೋಜಿ, ಗಿರಜವ್ವ ಗಿಡ್ಡಣ್ಣವರ, ಮಾಲಾವ್ವ ಆಲದಕಟ್ಟಿ, ಪಾರ್ವತೆವ್ವ ಸತ್ಯಪ್ಪನವರ, ದೊಡ್ಡಕ್ಕ ಆಲದಕಟ್ಟಿ, ಶಾಂತಕ್ಕ ಹುರಳಿ, ದೇವಸ್ಥಾನ ಅರ್ಚಕಿ ನೀಲಮ್ಮ ಆಲದಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net