ಯುಪಿಎಸ್​ಸಿ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್​​ ಮೊರೆ ಹೋದ ಪೂಜಾ ಖೇಡ್ಕರ್​​​​

Untitled-design-47-1
Published on

ನವದೆಹಲಿ: ಮಹಾರಾಷ್ಟ್ರ ಕೇಡರ್‌ನಿಂದ ವಜಾಗೊಂಡಿರುವ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಕೇಂದ್ರ ಲೋಕಾಸೇವಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಬುಧವಾರ(ಆಗಸ್ಟ್​​ 7) ಹೈಕೋರ್ಟ್​​ ಮೊರೆ ಹೋಗಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗವು(ಕೆಪಿಎಸ್​ಸಿ) ತಮ್ಮ ಉಮೇದುವಾರಿಕೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಪೂಜಾ ಖೇಡ್ಕರ್​​ ದೆಹಲಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

ತಮ್ಮ ಉಮೇದುವಾರಿಕೆಯನ್ನು ರದ್ದುಗೊಳಿಸಿದ ಯುಪಿಎಸ್​ಸಿ ಆದೇಶವನ್ನು ತಾವು ಇನ್ನೂ ಸ್ವೀಕರಿಸಿಲ್ಲ. ಹಾಗೂ ಈ ಬೆಳವಣಿಗೆಯನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿರುವುದಾಗಿ ಪೂಜಾ ಖೇಡ್ಕರ್​​ ಹೈಕೋರ್ಟ್​​ಗೆ ತಿಳಿಸಿದ್ದಾರೆ.

ವಂಚನೆ ಮತ್ತು ಫೋರ್ಜರಿ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್​ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸಲು ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಯುಪಿಎಸ್​​ಸಿ ಜುಲೈ 31ರಂದು ತಿಳಿಸಿತ್ತು. ಅಲ್ಲದೆ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರೆಂದು ತಿಳಿದ ಬಳಿಕ ಯುಪಿಎಸ್​ಸಿ ಪೂಜಾ ಖೇಡ್ಕರ್​​ ಮುಂದಿನ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ನಿಷೇಧ ಹೇರಿದೆ.

ಈ ಪ್ರಕರಣದ ವಿಚಿತ್ರವೆಂದರೆ ಉಮೇದುವಾರಿಕೆಯನ್ನು ರದ್ದುಗೊಳಿಸುವ ಆದೇಶವನ್ನು ಇಲ್ಲಿಯವರೆಗೆ ಹಸ್ತಾಂತರಿಸಲಾಗಿಲ್ಲ. ನನ್ನ ಬಳಿ ಇರುವುದು ಪತ್ರಿಕಾ ಪ್ರಕಟಣೆ ಮಾತ್ರ. ಪತ್ರಿಕಾ ಪ್ರಕಟಣೆಯನ್ನು ರದ್ದುಗೊಳಿಸಬೇಕು. ಅವರು ನನಗೆ ಆದೇಶವನ್ನು ಪೂರೈಸಬೇಕು ಇದರಿಂದ ಸೂಕ್ತ ನ್ಯಾಯಮಂಡಳಿಯನ್ನು ಸಂಪರ್ಕಿಸಬಹುದು ಎಂದು ಪೂಜಾ ಖೇಡ್ಕರ್​​​ ಪರ ವಕೀಲೆ ಇಂದಿರಾ ಜೈಸಿಂಗ್​​ ನ್ಯಾಯಾಲಯಕ್ಕೆ ತಿಳಿಸಿದರು.

ಪೂಜಾ ಖೇಡ್ಕರ್ ಅವರು ಎಲ್ಲಿದ್ದಾರೆ ಎಂಬುದು ತಿಳಿಯದ ಕಾರಣ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಎರಡು ದಿನಗಳಲ್ಲಿ ಪೂಜಾ ಖೇಡ್ಕರ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸುವ ಆದೇಶವನ್ನು ನೀಡುವುದಾಗಿ ದೆಹಲಿ ಹೈಕೋರ್ಟ್‌ಗೆ ಯುಪಿಎಸ್​​ಸಿ ಪರ ವಕಿಲ ತಿಳಿಸಿದ್ದಾರೆ.

ತಮ್ಮ ಉಮೇದುವಾರಿಕೆಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಲು ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಪೂಜಾ ಖೇಡ್ಕರ್ ಅವರಿಗೆ ಹೈಕೋರ್ಟ್ ಸ್ವಾತಂತ್ರ್ಯವನ್ನು ನೀಡಿದೆ. ಪೂಜಾ ಖೇಡ್ಕರ್​ ವಿರುದ್ಧ, ತರಬೇತಿ ನಿರತ ಐಎಎಸ್ ಅಧಿಕಾರಿಯಾಗಿ ತನಗೆ ಅರ್ಹವಲ್ಲದ ಸೌಲಭ್ಯಗಳನ್ನು ಕೇಳಿದ್ದಾರೆ. ಹಿರಿಯ ಅಧಿಕಾರಿಯೊಬ್ಬರ ಚೇಂಬರ್​​ ಅನ್ನು ಒತ್ತುವರಿ ಮಾಡಿರುವ ಆರೋಪ, ಖೇಡ್ಕರ್ ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ, ಪೂಜಾ ಖೇಡ್ಕರ್ ತಮ್ಮ ವೈಯಕ್ತಿಕ ಆಡಿ ಕಾರಿನಲ್ಲಿ ಕೆಂಪು ಬೀಕನ್ ಮತ್ತು ಮಹಾರಾಷ್ಟ್ರ ಸರ್ಕಾರದ ಫಲಕವನ್ನು ಅಳವಡಿಸಿದ್ದಾರೆ ಎಂಬ ಆರೋಪಗಳಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net