

ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಭಾನುವಾರ ರಾತ್ರಿ ಅಕ್ಷಶಃ ರಣರಂಗವಾಗಿ ಮಾರ್ಪಟ್ಟಿತು. ಪೋರ್ಚುಗಲ್ನ ಲಿಸ್ಬೊನ್ನಲ್ಲಿ ನಡೆದ ಫುಟ್ಬಾಲ್ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್-ಜಮೈರ್ನ್ ತಂಡ (ಪಿಎಸ್ಜಿ) 0-1 ಗೋಲುಗಳಿಂದ ಬೇರ್ಯನ್ ಮುನಿಚ್ ಎದುರು ಸೋಲನುಭವಿಸಿದ್ದೆ ತಡ, ತಂಡದ ಅಭಿಮಾನಿಗಳು ಬೀದಿಗಿಳಿದು ದಾಂಧಲೆ ನಡೆಸಿದ್ದಾರೆ. ದಾಂಧಲೆ ಸಂಬಂಧ ಸ್ಥಳೀಯ ಪೊಲೀಸರು 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ನಗರದ ಕೇಂದ್ರ ಭಾಗದಲ್ಲಿ ಸುಮಾರು 5 ಸಾವಿರ ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಿಸುವ ಸಲುವಾಗಿ ಒಂದೆಡೆ ಸೇರಿದ್ದರು, ಅಭಿಮಾನಿಗಳಿಗೆ ಬಿಗ್ ಸ್ಕ್ರೀನ್ ಮೂಲಕ ಪಂದ್ಯ ನೋಡಲು ಅನುವು ಮಾಡಿಕೊಡಲಾಗಿತ್ತು.
ಇದನ್ನೂ ಓದಿ: ಸಿಪಿಎಲ್ : ಟಿಕೆಆರ್ ತಂಡಕ್ಕೆ ಹ್ಯಾಟ್ರಿಕ್ ಜಯ
ಯುರೋಪ್ನ ಪ್ರತಿಷ್ಠಿತ ಟ್ರೋಫಿ ಗೆದ್ದ 2ನೇ ತಂಡ ಎನಿಸಿಕೊಳ್ಳಲು ಪಿಎಸ್ಜಿ ವಿಫಲವಾಯಿತು. ಈ ಸಾಧನೆ ಮಾಡಿದ ಮಾರ್ಷೆಲ್ಲಿ ಏಕೈಕ ತಂಡ ಎನಿಸಿದೆ. 1993 ರಲ್ಲಿ ಈ ಸಾಧನೆ ಮಾಡಿತ್ತು. ಪಿಎಸ್ಜಿ ತಂಡ ಸಾಂಪ್ರದಾಯಿಕ ಎದುರಾಳಿ ಮಾರ್ಷೆಲ್ಲಿ ತಂಡದ ಅಭಿಮಾನಿಗಳು ಸಂಭ್ರಮಿಸಿದ್ದೆ ಗಲಾಟೆಗೆ ಮೂಲ ಕಾರಣ ಎನ್ನಲಾಗಿದೆ. ಮತ್ತೊಂದೆಡೆ, ಗೆಲುವಿನಂಚಿನಲ್ಲಿ ಎಡವಿದ್ದರಿಂದ ಪಿಎಸ್ಜಿ ಅಭಿಮಾನಿಗಳ ಸಿಟ್ಟು ನೆತ್ತಿಗೇರಿತ್ತು. ಎರಡು ತಂಡಗಳು ಅಭಿಮಾನಿಗಳ ನಡುವೆ ಮರಾಮಾರಿ ನಡೆದಿದೆ. ಈ ವೇಳೆ ಗಲಾಟೆ ನಿಯಂತ್ರಿಸಲು ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿದರು.
ಚೊಚ್ಚಲ ಪ್ರಶಸ್ತಿ ಗೆಲುವಿನ ಅವಕಾಶ ಕೈಚೆಲ್ಲಿದ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೊದಲಾರ್ಧದಲ್ಲಿ ಗೋಲುಗಳಿಸಲು ಇದ್ದ ಅವಕಾಶ ಸ್ಟಾರ್ ಆಟಗಾರರಾದ ನೇಮರ್ ಹಾಗೂ ಕೈಲಿನ್ ಎಂಬಾಬೆ ಕೈಚೆಲ್ಲಿಸಿದರು. ಕತಾರಿ ಸ್ಪೋರ್ಟ್ಸ್ ಫ್ರೆಂಚ್ ಕ್ಲಬ್ಗೆ ಸಾಕಷ್ಟು ಹಣ ವ್ಯಯಿಸಿದೆ. ದೇಶೀಯ ಲೀಗ್ಗಳಲ್ಲಿ ಪ್ರಭುತ್ವ ಸಾಧಿಸಿದರೂ ಯುರೋಪ್ ಸ್ಪರ್ಧೆಯಲ್ಲಿ ಎಡವಿತು.