ಜಾತಿ, ಮತ, ಪಂಥದ ಹೆಸರಿನಲ್ಲಿ ವಿಭಜನೆ : ಚಕ್ರವರ್ತಿ ಸೂಲಿಬೆಲೆ ಹೇಳಿಕೆ

7
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಪರಿಶುದ್ಧ ಗಂಗೆ ಸ್ವರೂಪದಂತಿರುವ ಹಿಂದು ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ಹೋಳಿ ಇರಲಿ, ದೀಪಾವಳಿ ಇರಲಿ ಹಿಂದುಗಳ ಮೇಲೆ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ. ಹಿಂದುಗಳ ಆಚರಣೆ ಬಗ್ಗೆ ಪ್ರಸಾರ ಮಾಧ್ಯಮಗಳ ಮುಖಾಂತರ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಹಿಂದು ಜನಜಾಗೃತಿ ಸಮಿತಿ ವತಿಯಿಂದ ಬಿ.ಸಿ.ರೋಡಿನಲ್ಲಿ ನಡೆದ ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನದಲ್ಲಿ ಮಾತನಾಡಿದರು.

ಹಿಂದುಗಳ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳ ಮೇಲೆ ಆರೋಪ ಮಾಡಲಾಗುತ್ತದೆ. ಹಿಂದು ಸಮಾಜ ಜಾಗೃತವಾದರೆ ಇತರ ಪಂಥೀಯರು ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ದೇಶದ ಸಂತರ ಮೇಲೆ ಆರೋಪ, ಆಕ್ರಮಣ ಮಾಡಲಾಗುತ್ತಿದೆ. ಎಡಪಂಥೀಯರು ಕ್ರಿಟಿಕಲ್ ರೇಸ್ ಥಿಯರಿ ಮುಖಾಂತರ ಹಿಂದುಗಳನ್ನು ಜಾತಿ, ಮತ, ಪಂಥಗಳ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ. ಅಮೆರಿಕದಿಂದ ಪ್ರಾಯೋಜಿತ ಮತಾಂತರ, ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದು ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರವೆಂದರೆ ನಮ್ಮ ಧರ್ಮ ರಕ್ಷಣೆ ನಮ್ಮದೆ ಕರ್ತವ್ಯವಾಗಿದೆ ಎಂಬ ಅರಿವು ನಮ್ಮಲ್ಲಿ ನಿರ್ಮಾಣವಾಗಬೇಕು. ಧರ್ಮ ರಕ್ಷಣೆಗಾಗಿ ಸರ್ವಸ್ವ ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದರು.

ಶಂಖನಾದ, ವೇದಮಂತ್ರ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯ ವಕೀಲ ಕೃಷ್ಣಮೂರ್ತಿ ಮಾತನಾಡಿ, ಸ್ವಾರ್ಥ ಮರೆತು ನಾವು ಪರಮಾರ್ಥದೆಡೆಗೆ ಹೋಗಬೇಕಾಗಿದೆ. ವಿವಿಧ ಸಂಘಟನೆಗಳು ಸೇರಿ ಹಿಂದು ರಾಷ್ಟ್ರದೆಡೆಗೆ ಸಾಗಬೇಕಾಗಿದೆ. ಇದಕ್ಕಾಗಿ ನ್ಯಾಯ ವ್ಯವಸ್ಥೆ ಅರಿತುಕೊಂಡು ಸದುಪಯೋಗ ಮಾಡಬೇಕು. ವಕೀಲರು ತಮ್ಮ ಕರ್ತವ್ಯವೆಂದು ರಾಷ್ಟ್ರ, ಧರ್ಮದ ವಿಚಾರಗಳಲ್ಲಿ ದಿಟ್ಟ ಹೆಜ್ಜೆಗಳನ್ನಿಡಬೇಕು ಎಂದು ತಿಳಿಸಿದರು.

ಹಿಂದು ರಾಷ್ಟ್ರ ಆಕ್ಷೇಪ, ಖಂಡನೆ, ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ, ಶಾಸ್ತ್ರ ಈ ಎರಡು ಗ್ರಂಥಗಳ ಇ-ಬುಕ್ ಉದ್ಘಾಟನೆಯನ್ನು ಗಣ್ಯರು ನೆವೇರಿಸಿದರು. ಸನಾತನ ಸಂಸ್ಥೆ ಸಂತರಾದ ರಮಾನಂದ ಗೌಡ, ಉದ್ಯಮಿ ಎಂ.ಜೆ.ಶೆಟ್ಟಿ, ಹಿಂದು ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net