

ಮಂಡ್ಯ: ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕಳೆದ ಒಂದೂವರೆ ತಿಂಗಳಿಂದ ಕೂಲಿ ಹಣವನ್ನು ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕೂಲಿ ಹಣ ಬಿಡುಗಡೆ ಮಾಡದೇ ಕೂಲಿಕಾರರನ್ನು ಸಾಲದ ಕೂಪಕ್ಕೆ ದೂಡಿದೆ. ಇದು ಕೇಂದ್ರ ಸರ್ಕಾರ ಕೂಲಿಕಾರರ ಪರವಲ್ಲ ಎಂಬ ನಿಲುವನ್ನು ತೋರುತ್ತದೆ. ಜಿಪಂ ಅಧಿಕಾರಿಗಳು ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ನೆಪವೊಡ್ಡಿ ಕೂಲಿಕಾರರನ್ನು ಕಡೆಗಣಿಸುತ್ತಿದ್ದಾರೆ. ಕೂಡಲೇ ಕೆಲಸ ಕೊಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ರಾಜ್ಯಸರ್ಕಾರ ಬಡ ಕೂಲಿಕಾರರ ವಸತಿ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಬೇಕು. ಬಿಪಿಎಲ್ ಕುಟುಂಬಗಳಿಗೆ ಕನಿಷ್ಟ 100 ಯೂನಿಟ್ ವಿದ್ಯುತ್ ನೀಡಬೇಕು. ಮಾ.8ರಂದು ಉಡುಪಿ, ಕೊಡಗು, ಮೈಸೂರು ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಗಳ ಪ್ರಮುಖ ಕಾರ್ಯಕರ್ತರ ಸಂಘಟನಾ ಸಮಾವೇಶವನ್ನು ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ. ಕೃಷಿ ಕೂಲಿಕಾರರ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್, ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಹಿರಿಯ ಉಪಾಧ್ಯಕ್ಷ ಜಿ.ಎನ್.ನಾಗರಾಜು, ಮುನಿವೆಂಕಟಪ್ಪ, ರಾಜ್ಯ ಕಾರ್ಯದರ್ಶಿ ಬಿ.ಎಂ.ಶಿವಮಲ್ಲಯ್ಯ, ಬಿ.ಹನುಮೇಶ್, ಸರೋಜಮ್ಮ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮಂಡ್ಯ ತಾಲೂಕು ಅಧ್ಯಕ್ಷ ಅಮಾಸಯ್ಯ, ಮದ್ದೂರು ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ಕುಮಾರ್, ಆರ್.ರಾಜು ಇದ್ದರು