

ಕುಶಾಲನಗರ : ಹೆಬ್ಬಾಲೆ ಗ್ರಾಮ ಪಂಚಾಯಿತಿ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಹೆಬ್ಬಾಲೆ ಗ್ರಾಮದ ಸಣ್ಣ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಂಚಾಯಿತಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಪಂ ವ್ಯಾಪ್ತಿಯ ಹಳಗೋಟೆ, ಹೊಸಕೋಟೆ, ಚಿನ್ನೇನಹಳ್ಳಿ, ಮರೂರು ವ್ಯಾಪ್ತಿಯಲ್ಲಿ ಕಳೆದ ಐದು ತಿಂಗಳಿಂದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಯಾವುದೇ ಕ್ರಮವನ್ನು ವಹಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿ ಅಧಿಕಾರಿ ಮತ್ತು ಆಡಳಿತ ಮಂಡಳಿಯ ವಿರುದ್ದ ಧಿಕ್ಕಾರ ಕೂಗಿದರು.
ಗ್ರಾಮಗಳಿಗೆ ಬೀದಿ ದೀಪ ಅಳವಡಿಸಬೇಕು. ಹೂಳು ತುಂಬಿರುವ ಚರಂಡಿಗಳ ಸ್ವಚ್ಛತೆ, ಗುಂಡಿಮಯ ರಸ್ತೆಗಳ ದುರಸ್ತಿ ಸೇರಿದಂತೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡದ ಹಿನ್ನೆಲೆಯಲ್ಲಿ ಈ ಗ್ರಾಮಗಳಲ್ಲಿ ಈಗಾಗಲೇ ಡೆಂೆ, ಮಲೇರಿಯಾ ಇನ್ನೂ ಮುಂತಾದ ಕಾಯಿಲೆ ಕಾಣಿಸಿಕೊಂಡು ಅನೇಕ ಜನರು ದಿನ ಆಸ್ಪತ್ರೆಗೆ ಅಲೆಯುವಂತಹ ಪ್ರಸಂಗ ಎದುರಾಗಿದೆ. ಅನೇಕ ಬಾರಿ ಆಡಳಿತ ಮಂಡಳಿಯವರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಹೆಬ್ಬಾಲೆ ಸಣ್ಣ ಬೆಳೆಗಾರರ ಸಂಘ ಗ್ರಾಮ ಘಟಕದ ಅಧ್ಯಕ್ಷ ಸುರೇಶ್ ಅರೋಪಿಸಿದರು.
ಪ್ರತಿಭಟನಾ ನಿರತರು ಮಧ್ಯಾಹ್ನದವರಗೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುರೇಶ್ ಅವರಿಗೆ ಮನವಿ ನೀಡಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಚ್.ಇ.ಸಣ್ಣಪ್ಪ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ್, ಜಿಲ್ಲಾ ಸಮಿತಿಯ ಸದಸ್ಯ ಎನ್.ಟಿ.ಚೆಂಗಪ್ಪ, ಗ್ರಾಮ ಮುಖಂಡರಾದ ಮಹದೇವ, ಸಾವಿತ್ರಮ್ಮ, ಮಂಜುನಾಥ, ಮಣಿ, ಸಾಕಮ್ಮ, ವನಜಾಕ್ಷಿ, ಎಚ್.ಟಿ.ವೀರಪ್ಪ, ಪ್ರತಾಪ್ ಇರರು ಇದ್ದರು.