ಪಾಲಿಕೆ ಕಟ್ಟಡಗಳ ಸುರಕ್ಷತಾ ಬಗ್ಗೆ ಮಾಹಿತಿ ಒದಗಿಸಿ:ಬಿಬಿಎಂಪಿ ಸೂಚನೆ

BBMP fire
Published on

ಬೆಂಗಳೂರು: ಪಾಲಿಕೆಯ ಗುಣನಿಯಂತ್ರಣ ಪ್ರಯೋಗಾಲಯ ಕಚೇರಿಯಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಬಳಿಕ ಎಚ್ಚೆತ್ತಗೊಂಡ ಬಿಬಿಎಂಪಿ, ತಮ್ಮ ಸ್ವತ್ತುಗಳಲ್ಲಿ ನಿರ್ಮಿಸಿರುವ ಕಟ್ಟಡಗಳ ಸಾಮರ್ಥ್ಯ ಮತ್ತು ಸುರಕ್ಷತಾ ಮಟ್ಟವನ್ನು ಪರಿಶೀಲಿಸಲು ಮುಂದಾಗಿದೆ.

ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯ ಕಚೇರಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 9 ಮಂದಿ ಗಾಯಗೊಂಡಿದ್ದರು. ಇದರಲ್ಲಿ ಅಧೀಕ್ಷಕ ಅಭಿಯಂತರ ಶಿವಕುಮಾರ್ ಮೃತಪಟ್ಟಿದ್ದರು. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ, ಇನ್ನುಮುಂದೆ ಅಗ್ನಿ ಅವಘಡ ತಡೆಗೆ ಎಲ್ಲ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ. ಬಿಬಿಎಂಪಿ ಸ್ವತ್ತುಗಳಲ್ಲಿ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ.

ನಕ್ಷೆ ಅನುಮೋದನೆ,ಒಳಚರಂಡಿ ಹಾಗೂ ಅಗ್ನಿ ಸುರಕ್ಷತಾ ಕ್ರಮ ಸೇರಿ ಇತರ ನಿಯಮಗಳನ್ನು ಅಳವಡಿಸಿಕೊಂಡಿಲ್ಲ. ಯುಟಿಲಿಟಿ, ಯೂನಿಟಿ ಕಟ್ಟಡ, ಕೇಂದ್ರ ಕಚೇರಿಯಲ್ಲಿ ಅನೆಕ್ಸ್ ಕಟ್ಟಡಗಳು ಹಾಗೂ ಜಯನಗರ ವಾಣಿಜ್ಯ ಸಂಕೀರ್ಣ ಸೇರಿ ನಗರದ ವಿವಿಧ ಕಡೆಗಳಲ್ಲಿರುವ ಬಿಬಿಎಂಪಿಯ ಬೃಹತ್ ಕಟ್ಟಡಗಳಲ್ಲಿ ಒಂದಿಲ್ಲೊಂದು ಸುರಕ್ಷತಾ ಕೊರತೆ ಇದೆ. ಸಾರ್ವಜನಿಕರಿಗೆ ಬುದ್ದಿ ಹೇಳುವ ಪಾಲಿಕೆಯು, ತಮ್ಮ ಕಟ್ಟಡಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಮಾಡದಿರುವ ಬಗ್ಗೆಯೂ ದೂರುಗಳು ಬಂದಿತ್ತು.

ಎಂಟು ವಲಯಗಳ ವ್ಯಾಪ್ತಿಯಲ್ಲಿ ಅಂದಾಜು 15 ಬೃಹತ್ ಕಟ್ಟಡಗಳನ್ನು ಬಿಬಿಎಂಪಿ ನಿರ್ಮಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಪ್ರತಿ ನಿತ್ಯ ಪಾಲಿಕೆ ಕಚೇರಿಗಳಿಗೆ ಲಕ್ಷಾಂತರ ಜನರು ಬಂದು ಹೋಗುತ್ತಾರೆ. ಹೀಗಾಗಿ,ಕಟ್ಟಡಗಳ ಸುರಕ್ಷತೆ ಬಗ್ಗೆ ಪಾಲಿಕೆ ಹೆಚ್ಚು ಗಮನಹರಿಸಬೇಕಿದೆ. ಹೀಗಾಗಿ, ಎಲ್ಲ ಕಟ್ಟಡಗಳ ಸಂಪೂರ್ಣವಾಗಿ ಪರಿಶೀಲಿಸಿ ‘ಸ್ಟ್ರಕ್ಚರಲ್ ಆಡಿಟ್ ರಿಪೋರ್ಟ್’ ಜತೆಗೆ ಸುರಕ್ಷತಾ ಕ್ರಮಗಳ ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿಯನ್ನು 15 ದಿನದೊಳಗೆ ಒದಗಿಸುವಂತೆ ಆಯಾ ವಲಯದ ಇಂಜಿನಿಯರ್‌ಗಳಿಗೆ ಪಾಲಿಕೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net