

ನರಗುಂದ: ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿ ಒಂದೇ ಸೂರಿನಡಿ ಎಲ್ಲರಿಗೂ ವ್ಯಾಪಾರಕ್ಕೆ ಮುಕ್ತ ಅವಕಾಶ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ತರಕಾರಿ ವ್ಯಾಪಾರಸ್ಥರು ಮಂಗಳವಾರ ಅಂಗಡಿ ಬಂದ್ ಮಾಡಿ ಪುರಸಭೆ ಎದುರಿಗೆ ಪ್ರತಿಭಟನೆ ನಡೆಸಿದರು.
ಪಟ್ಟಣ ಸೇರಿ ತಾಲೂಕಿನ ಹತ್ತಾರು ಹಳ್ಳಿಗಳ ಜನರಿಗೆ ಅನೂಕೂಲವಾಗಿರುವ ನರಗುಂದ ತರಕಾರಿ ಮಾರುಕಟ್ಟೆಯಲ್ಲಿ ಬೀದಿದನಗಳ ಉಪಟಳ ಹೆಚ್ಚಾಗಿದೆ. ವ್ಯಾಪಾರಸ್ಥರಿಗೆ ಕುಡಿಯುವ ನೀರು, ಚರಂಡಿ, ಶೌಚಗೃಹದ ವ್ಯವಸ್ಥೆಯಿಲ್ಲ. ಸುಮಾರು ವರ್ಷಗಳಿಂದ ನರಕಯಾತನೆ ಅನುಭವಿಸುವಂತಾಗಿದೆ. ವಿದ್ಯುತ್ ದೀಪಗಳಿದ್ದರೂ ರಾತ್ರಿ ವೇಳೆ ಉರಿಯುತ್ತಿಲ್ಲ. ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹವಿಲ್ಲ ಎಂದು ದೂರಿದರು.
ಪುರಸಭೆಯಿಂದ ನಿರ್ಮಿಸಿರುವ 83 ತರಕಾರಿ ಮಳಿಗೆಗಳನ್ನು ಕೆಲವರು ಕಡಿಮೆ ಬೆಲೆಗೆ ಬಾಡಿಗೆ ಪಡೆದು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ನೀಡುತ್ತಿದ್ದಾರೆ. ಬಹುತೇಕ ವ್ಯಾಪಾರಸ್ಥರು ಬಸ್ ನಿಲ್ದಾಣ ಹತ್ತಿರದಲ್ಲಿರುವ ಶ್ರೀರಾಮ ಪೇಠೆ (ಚೋರ್ ಬಜಾರ್‌ನಲ್ಲಿ) ಸಾರ್ವಜನಿಕರು, ವಾಹನ ಸವಾರರಿಗೆ ಕಿರಿಕಿರಿಯಾಗುವಂತೆ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪುರಸಭೆಗೆ ಬಾಡಿಗೆ ಪಾವತಿಸುವ ವ್ಯಾಪಾರಸ್ಥರು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಮುಖ್ಯಾಧಿಕಾರಿ ಅಮಿತ್ ತಾರದಾಳೆ ಮನವಿ ಸ್ವೀಕರಿಸಿ ಮಾತನಾಡಿ, ನರಗುಂದದ ತರಕಾರಿ ಮಾರುಕಟ್ಟೆಯನ್ನು ನಗರೋತ್ಧಾನ ಯೋಜನೆಯ 2.15 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡ್ಮೂರು ತಿಂಗಳಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ಹಿನ್ನೆಲೆ ಅಲ್ಲಿನ ಯಾವುದೇ ಮಳಿಗೆಯವರಿಂದ 2023-24ನೇ ಸಾಲಿನ ಬಾಡಿಗೆ ಪಡೆದಿಲ್ಲ. ನೂತನ ಮಾರುಕಟ್ಟೆ ನಿರ್ಮಿಸುವ ಹಿನ್ನೆಲೆ ಎಲ್ಲ ವ್ಯಾಪಾರಸ್ಥರಿಗೆ ನೋಟಿಸ್ ನೀಡಿ ಬೇರೆಡೆ ಸ್ಥಳಾಂತರಗೊಳಿಸಲು ಬುಧವಾರ ಬೆಳಗ್ಗೆ 11ಗಂಟೆಗೆ ಪುರಸಭೆ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಪಡೆದು ಎಪಿಎಂಸಿ ಅಥವಾ ಯಾವುದಾದರೂ ಬೇರೆ ಕಡೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ಸಿಪಿಐ ಮಲ್ಲಯ್ಯ ಮಠಪತಿ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಅಂಗಮೇಶ ಬ್ಯಾಳಿ, ಐ.ಎಚ್. ಫರಾಸ್, ಗುರುನಾಥ ಮೇಲಿನಮನಿ, ಶಿವಾನಂದ ಹಿರೇಮಠ, ಮಾಬುಲಿ ಅತ್ತಾರ, ಬಸವ್ವ ಭಜಂತ್ರಿ, ಅಲ್ತಾಫ್ ಅತ್ತಾರ, ಬಾಬುಸಾಬ್ ಧಾರವಾಡ, ಸಾಹೀಲ್ ಮುಲ್ಲಾ, ಫಕೀರವ್ವ ಮೇಗಿಲಮನಿ, ಬಿಲಾಲ್ ಜೋರಂ, ಮಕ್ತುಂಸಾಬ್ ರಾಜೇಖಾನ, ರುದ್ರಪ್ಪ ಹಡಪದ, ಸುಭಾಸ ಧರಿಯಣ್ಣವರ, ಆರ್.ಎಂ. ರಾಮದುರ್ಗ, ರಾಮಣ್ಣ ವಿಜಾಪೂರ, ಅಮೀನ ಅತ್ತಾರ, ಮಂಜುನಾಥ ರಟ್ಟಿಹಳ್ಳಿ, ಸಿ.ಆರ್. ಬಾಣಕಾರ, ಎಸ್.ಎಂ. ನಾಗನೂರ, ವೈ.ಕೆ. ನವಲೆ, ಮೋದಿನಸಾವ ಪರಾಸ್, ಇತರರಿದ್ದರು.