

ತುಮಕೂರು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಾರಂಭಿಸಿದೆ. ಜಿಲ್ಲೆಯೆಲ್ಲೆಡೆಗಳಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಅಧಿಕಾರಿಗಳ ಜತೆ ಸಭೆ ನಡೆಸಿ
ಕೆಲವು ಸೂಚನೆಗಳನ್ನು ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿಯ ಸಭೆಯಲ್ಲಿ ಜಿ.ಪ್ರಭು, ಬೇಸಿಗೆಯಿಂದ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ರೂಪಿಸಬೇಕು
ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಜಲ್ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರನ್ನು ಒದಗಿಸುವ ಪೈಪ್ಲೈನ್ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 3 ವಾಟರ್ ಟೆಸ್ಟಿಂಗ್ ಲ್ಯಾಬ್ಗಳಿಂದ ಈವರೆಗೆ ಯಾವುದೇ ನೀರು ಪರೀಕ್ಷಾ ವರದಿಗಳು ಸಲ್ಲಿಕೆಯಾಗಿಲ್ಲ ಎಂಬ ಮಾಹಿತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಹೊಣೆಗಾರಿಕೆ ನಮ್ಮದು, ಈ ನಿಟ್ಟಿನಲ್ಲಿ ನೀರಿನ ಜೈವಿಕ ಹಾಗೂ ರಾಸಾಯನಿಕ ಪರೀಕ್ಷೆ ನಡೆಸಿ ಪ್ರತಿ 15 ದಿನಗಳಿಗೊಮ್ಮೆ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅವಶ್ಯಕತೆ ಇರುವ ಕಡೆ ಅಂಗನವಾಡಿ ಕೇಂದ್ರಗಳ ನಿಮಾರ್ಣಕ್ಕೆ ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಜಿಲ್ಲಾ ಪಂಚಾಯತಿಯಿಂದಲೇ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಆರ್ಥಿಕ ಪ್ರಗತಿ ಶೇ.26 ಮಾತ್ರ!
ಜೆಜೆಎಂ ಕಾಮಗಾರಿಗಳನ್ನು 2021ರಿಂದ ನಾಲ್ಕು ಹಂತದಲ್ಲಿ 2229ಕೋಟಿ ರೂ. ವೆಚ್ಚದ 3699 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಪ್ರಗತಿ ಕುಂಟುತ್ತಲೇ ಸಾಗಿದೆ. ಅನುಮೋದನೆ ನೀಡಿರುವ ಎಲ್ಲ ಕಾಮಗಾರಿಗಳಿಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, 1449 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 1372 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಮಗಾರಿಗಳಿಗೆ 585ಕೊಟಿ ರೂ. ಬಳಸಿಕೊಂಡಿರುವುದು ಇಲಾಖೆ ಅಧಿಕಾರಿಗಳಿಗೆ ಇರುವ ಇಚ್ಛಾಶಕ್ತಿ ತೋರಿಸುತ್ತಿದೆ. ಗ್ರಾಮೀಣ ರಸ್ತೆಗಳನ್ನು ಅಗೆದು ಬಿಟ್ಟರುವ ಗುತ್ತಿಗೆದಾರರು ಆಮೆಗತಿಯಲ್ಲಿ ಕಾಮಗಾರಿ ನಡೆಸಲು ಬಿಲ್ ನೀಡಲು ಜಿಪಂನಲ್ಲಿ ಜಾರಿಯಾಗಿರುವ ಕಠಿಣ ನಿಲುವು ಕಾರಣ ಎಂಬ ಮಾತಿದೆ. 2021ರಲ್ಲಿ ಆರಂಭವಾದ ಬ್ಯಾಚ್&1ರ 84 ಕಾಮಗಾರಿಗಳಲ್ಲಿ ಶೇ.70.04 ಹಣವನ್ನು ಮಾತ್ರ ಈವರೆಗೂ ಬಳಸಿಕೊಳ್ಳಲಾಗಿದೆ, ಬ್ಯಾಚ್ 2ರಲ್ಲಿ ಶೇ.44, 3ರಲ್ಲಿ 32.38, ಬ್ಯಾಚ್ 4ರಲ್ಲಿ ಶೇ.26.24ರಷ್ಟು ಹಣ ಬಳಸಿಕೊಳ್ಳಲಾಗಿದೆ. ಕಳೆದ 1 ವರ್ಷದಿಂದ ಜಿಪಂ ಹಾಗೂ ಜೆಜೆಎಂ ಕಾಮಗಾರಿ ಪಡೆದಿರುವ ಗುತ್ತಿಗೆದಾರರ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಕಾಮಗಾರಿ ಹಿಂದುಳಿಯಲು ಕಾರಣವಾಗಿದೆ ಎನ್ನಲಾಗಿದೆ.
ಜಾನುವಾರುಗಳಿಗೆ ಲಸಿಕೆ ಹಾಕಿಸಿ ತುಮಕೂರು: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಜಿಲ್ಲಾದ್ಯಂತ ಏ.26 ರಿಂದ ಜೂನ್ 4ರ ವರೆಗೆ ನಡೆಯಲಿದ್ದು, ಜಾನುವಾರುಗಳಿಗಾಗಿ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಗುರಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ
ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಲುಬಾಯಿ ರೋಗದ ಲಸಿಕೆ ಜಾನುವಾರುಗಳಿಗೆ ಕಡ್ಡಾಯವಾಗಿ ಹಾಕಿಸುವ ಹಾಗೂ ಲಸಿಕೆ ಉಚಿತವಾಗಿ ನೀಡುವ ಬಗ್ಗೆ ಪಶುಪಾಲಕರಲ್ಲಿ ಅರಿವು ಮೂಡಿಸಬೇಕು ಎಂದರು. ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ(ತಾಂತ್ರಿಕ) ಡಾ.ನಾಗಮಣಿ ಮಾತನಾಡಿ, ಕಳೆದ ವರ್ಷ ಹಮ್ಮಿಕೊಂಡಿದ್ದ 6ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ 478624 ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಶೇ.96ರಷ್ಟು ಗುರಿ
ಸಾಧಿಸಲಾಗಿತ್ತು ಎಂದರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 388209 ದನ ಹಾಗೂ 107969 ಎಮ್ಮೆ ಸೇರಿ ಒಟ್ಟು 496278 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಸೇರಿದಂತೆ 566650 ಲಸಿಕೆ ಡೋಸ್ ದಾಸ್ತಾನು ಮಾಡಲಾಗಿದೆ. ಲಸಿಕೆಯನ್ನು 4 ತಿಂಗಳೊಳಗಿನ ಕರು ಹಾಗೂ ತುಂಬು ಗರ್ಭವಿರುವ ರಾಸುಗಳನ್ನು ಹೊರತುಪಡಿಸಿ ಉಳಿದ ಜಾನುವಾರುಗಳಿಗೆ ನೀಡಲಾಗುವುದು ಎಂದರು.ಅಭಿಯಾನದಲ್ಲಿ ಲಸಿಕೆ ನೀಡಲು 271 ಇಲಾಖೆ ಲಸಿಕೆದಾರರು ಹಾಗೂ 226 ಇಲಾಖೇತರ ಲಸಿಕೆದಾರರು ಸೇರಿ ಒಟ್ಟು 497 ಲಸಿಕೆದಾರರನ್ನು ಬಳಸಿಕೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.
ಎನ್.ತಿಪ್ಪೇಸ್ವಾಮಿ ಅಧಿಕಾರಿಗಳು ಇದ್ದರು.