ಡಿಸಿ ಕಚೇರಿ ಎದುರು ಬಡ ರೈತರ ಪ್ರತಿಭಟನೆ

IMG-20230703-WA0024.jpg
Published on

ಬೆಳಗಾವಿ: ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ಸುಮಾರು 40 ವರ್ಷದಿಂದ ‘ಊಳುವವನೇ ಭೂಮಿ ಒಡೆಯ’ ಕಾಯ್ದೆಯಡಿ ಭೂಮಿ ಸಾಗುವಳಿ ಮಾಡಿಕೊಂಡು ಬಂದಿದ್ದ ರೈತರ ಮೇಲೆ ಜಮೀನಿನ ಮೂಲ ಮಾಲೀಕರು ಹಲ್ಲೆ ಮಾಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಟ್ಟೆ ಬಿಚ್ಚಿ ಪ್ರತಿಭಟಿಸಿದರು.
ಭೂಮಿಯ ಮೂಲ ಮಾಲೀಕರಿಂದ ರೈತರ ಮೇಲೆ ಹಲ್ಲೆ ನಡೆದಿವೆ ಎಂದು ರೈತರು ಬಟ್ಟೆ ಬಿಚ್ಚಿ ಗಾಯ ಪ್ರದರ್ಶಿಸಿದರು. ಬಡ ರೈತರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಯುವಂತೆ ಒತ್ತಾಯಿಸಿದರು. ಊಳುವವನೇ ಭೂಮಿ ಒಡೆಯ ಕಾಯ್ದೆಯಡಿ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ 1970ರಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಕಳೆದ ಎರಡು ವರ್ಷದಿಂದ ಏಕಾಏಕಿ ಆರ್‌ಟಿಸಿ ಉತಾರದಲ್ಲಿ ಮಾಲೀಕನ ಜತೆಗಿದ್ದ ರೈತರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಈ ಬಗ್ಗೆ ತಹಸೀಲ್ದಾರ್ ಅವರ ಗಮನಕ್ಕೆ ತಂದ್ದಿದ್ದೆವು. ತಾಂತ್ರಿಕ ದೋಷಗಳಿಂದ ರೈತರ ಹೆಸರುಗಳು ಬಿಟ್ಟು ಹೋಗಿವೆ. ತಪ್ಪುಗಳನ್ನು ಸರಿಪಡಿಸಿ, ಹೆಸರುಗಳನ್ನು ಸೇರಿಸಲಾಗುವುದು ಎಂದು ತಹಸೀಲ್ದಾರ್ ಹೇಳಿದ್ದರು. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ. ಹೊಲ ಸಾಗುವಳಿ ಮಾಡುತ್ತಿದ್ದ ರೈತರ ಮೇಲೆ ಸುನೀಲ ಅಮೃತ ಜಾಧವ ಹಲ್ಲೆ ಮಾಡಿಸಿದ್ದಾರೆ ಎಂದು ದೂರಿದರು.ಜಿಲ್ಲಾಧಿಕಾರಿ ಕಾಲಿಗೆ ಬಿದ್ದು ನೋವು ತೋಡಿಕೊಂಡರು.
ಹೊಲಗಳಲ್ಲಿ ಬಿತ್ತನೆ ಮಾಡಿದ್ದೇವೆ. ಹೊಲದ ಮೂಲ ಮಾಲೀಕರು ಗೂಂಡಾಗಳನ್ನು ಬಿಟ್ಟು ಮಹಿಳೆಯರು, ಮಕ್ಕಳು ಎನ್ನದೆ ಹಲ್ಲೆ ಮಾಡಿಸಿದ್ದಾರೆ. ಇದರಿಂದ ಗಾಯಗೊಂಡಿರುವ 10 ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಗ್ರಾಮ ಲೆಕ್ಕ ಸಹಾಯಕರು ಯಾರ ಗಮನಕ್ಕೆ ಬಾರದಂತೆ ಲಂಚ ಪಡೆದುಕೊಂಡು ಬೇರೆಯವರ ಹೆಸರಿಗೆ ಜಮೀನು ನೋಂದಾಯಿಸುವಂತಹ ಪ್ರಕರಣಗಳು ಕಂಡುಬಂದಿದ್ದು, ಇದರಿಂದ ಗ್ರಾಮದಿಂದ ಹಿಂಸಾಚಾರಗಳು ನಡೆಯುತ್ತಿರುವುದನ್ನು ತಡೆಯಬೇಕು. ಈ ಎಲ್ಲದರ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳು ಸೇರಿದಂತೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಗ್ರಾಮದ ಬಡ ರೈತರಿಗೆ ತುರ್ತಾಗಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಕ್ಕಿನಕೇರಿ ಗ್ರಾಪಂ ಅಧ್ಯಕ್ಷೆ ಚಬ್ಬುಬಾಯಿ ಶಂಕರ ಕಾಂಬಳೆ, ಕೃಷ್ಣ ಸಾವಂತ, ನಾಗು ಸಾವಂತ, ಮಾರುತಿ ಸಾವಂತ ಹಾಗೂ ರೈತ ಮುಖಂಡರು, ಮಾಜಿ ಸೈನಿಕರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net