ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಧರಣಿ, ಮತ್ತಷ್ಟು ಚುರುಕುಗೊಂಡ ಹೋರಾಟ

MEDICAL COLLEGE DHARANI
ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು. ಅರವಿಂದ ಕುಲಕರ್ಣಿ, ಸುರೇಶ ಬಿಜಾಪುರ, ವಿದ್ಯಾವತಿ ಅಂಕಲಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ)ದ ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಮತ್ತಷ್ಟು ಚುರುಕು ಪಡೆದಿದ್ದು, ಗುರುವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

ಈಗಾಗಲೇ ಹಲವು ಸುತ್ತಿನ ಪ್ರತಿಭಟನೆ, ಮನವಿ, ರ‌್ಯಾಲಿ, ಸಚಿವರಿಗೆ ಮನವಿ ಪತ್ರ ಸಲ್ಲಿಸುವುದು ಸೇರಿದಂತೆ ವಿವಿಧ ಹಂತದಲ್ಲಿ ಹೋರಾಟ ಕೈಗೊಳ್ಳಲಾಗಿದ್ದು, ಇದೀಗ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ಪದಾಧಿಕಾರಿಗಳು ಧರಣಿ ಆರಂಭಿಸುತ್ತಿದ್ದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿದವು.

ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸಕಲ ಸೌಲಭ್ಯಗಳಿವೆ. ಸುಮಾರು 149 ಎಕರೆಗೂ ಹೆಚ್ಚು ಸ್ಥಳಾವಕಾಶವಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇಷ್ಟೊಂದು ಸೌಲಭ್ಯಗಳಿಲ್ಲ. ಸರ್ಕಾರ ಇದನ್ನು ಗುರುತಿಸಿ ಪಿಪಿಪಿ ಮಾದರಿಯನ್ನು ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಆರಂಭಿಸಬೇಕೆಂದು ಒತ್ತಾಯಿಸಿದರು.

ಮುಖಂಡ ಅಣ್ಣಾರಾಯ ಈಳಗೇರ ಮಾತನಾಡಿ, ಒಂದು ವೇಳೆ ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಆರಂಭವಾದರೆ ಅಲ್ಲಿ ಬಡ ಮತ್ತು ಮಧ್ಯಮ ವರ್ಗದ ಹಾಗೂ ಜನಸಾಮಾನ್ಯರ ಮಕ್ಕಳು ಕಲಿಯಲು ಸಾಧ್ಯವಾಗುವುದಿಲ್ಲ. ಕ್ರಮೇಣ ಸಂಪೂರ್ಣ ಖಾಸಗೀಕರಣಗೊಂಡು ಬಡವರ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುತ್ತದೆೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಮುನ್ನಡೆಯಬೇಕಾಗುತ್ತದೆ ಎಂದರು.

ಜಗದೀಶ ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು 150 ಕ್ಕೂ ಅಧಿಕ ಜಾಗವಿರುವ ಏಕೈಕ ಜಿಲ್ಲೆ ಇದಾಗಿದ್ದು, ವಿದ್ಯಾರ್ಥಿ ಯುವಕರು ಇದರ ವಿರುದ್ಧ ಗಟ್ಟಿ ಧ್ವನಿಯಾಗಬೇಕು. ಒಂದು ವೇಳೆ ಖಾಸಗಿಯವರಿಗೆ ಅವಕಾಶ ಕೊಟ್ಟರೆ ಜಿಲ್ಲಾ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದರು.

ಸುರೇಶ ಬಿಜಾಪುರ ಮಾತನಾಡಿ, ಉದ್ದೇಶಿತ ಖಾಸಗಿ ಸಹಭಾಗಿತ್ವದಡಿ ವೈದ್ಯಕೀಯ ಕಾಲೇಜು ಆರಂಭಿಸುವುದನ್ನು ತೀವ್ರವಾಗಿ ವಿರೋಧಿಸಿ ಹೋರಾಟ ಹಮ್ಮಿಕೊಳ್ಳಲಾಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಹೋರಾಟ ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದರು.

ವಿದ್ಯಾವತಿ ಅಂಕಲಗಿ ಮಾತನಾಡಿ, ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯನ್ನು ಅಳವಡಿಸಲು ಬಿಡಬಾರದು. ಇದರ ವಿರುದ್ಧ ಹೋರಾಟಕ್ಕೆ ಜಿಲ್ಲೆಯ ಜನತೆ ಅಣಿಯಾಗಬೇಕೆಂದರು.

ಶ್ರೀನಾಥ ಪೂಜಾರಿ ಮಾತನಾಡಿ, ಸರ್ಕಾರ ಖಾಸಗಿ ವ್ಯಕ್ತಿಗಳ ಮುಂದೆ ಮಂಡಿಯೂರುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಜಿಲ್ಲೆಯ ಜನರ ಹಲವಾರು ವರ್ಷಗಳ ಬೇಡಿಕೆಯಾಗುಳಿದಿಲ್ಲ; ಬದಲಾಗಿ ಅದು ಈಗ ಜಿಲ್ಲೆಯ ಜನರ ಭಾವನೆಯಾಗಿ ಪರಿವರ್ತನೆಗೊಂಡಿದೆ. ಇದನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಚಿವರು ಮನವಿ ಮಾಡಬೇಕಿತ್ತು. ಆದರೆ, ಯಾವುದೇ ರೀತಿ ಒತ್ತಡ ಹಾಕದಿರುವುದು ದೊಡ್ಡ ದುರಂತ ಎಂದರು.

ಮುಖಂಡರಾದ ಅನಿಲ ಹೊಸಮನಿ, ಅಕ್ರಂ ಮಾಶಾಳಕರ್, ಮಲ್ಲಿಕಾರ್ಜುನ ಕೆಂಗನಾಳ, ಲಲಿತಾ ಬಿಜ್ಜರಗಿ, ಜಗದೇವ್ ಸುರ್ಯವಂಶಿ, ಶ್ರೀನಾಥ್ ಪೂಜಾರಿ, ದಸ್ತಗಿರ ಉಕ್ಕಲಿ, ಗೀತಾ ಎಚ್, ಮಹಾದೇವಿ ಧರ್ಮಶೆಟ್ಟಿ, ಮಲ್ಲಿಕಾರ್ಜುನ ಬಟಗಿ, ಬಾಬುರಾವ್ ಬೀರಕಬ್ಬಿ, ಸಿದ್ರಾಮ ಹಿರೇಮಠ, ಪ್ರಭುಗೌಡ ಪಾಟೀಲ, ಅಬ್ದುಲ್ ರೆಹಮಾನ್ ನಾಸಿರ, ಸುರೇಶ ಬಿಜಾಪುರ, ಸಿದ್ದನಗೌಡ ಪಾಟೀಲ, ಲಕ್ಷ್ಮಣ ಕಂಬಾಗಿ, ನೀಲಾಂಬಿಕ ಬಿರಾದಾರ, ಬಸೀರ್‌ಹ್ಮದ್ ತಾಂಬೆ, ಲಕ್ಷ್ಮಣ ಹಂದ್ರಾಳ, ಸಂಜೀವ ಕಂಬಾಗಿ, ಮಲ್ಲಿಕಾರ್ಜುನ ಎಚ್.ಟಿ, ವೆಂಕಟೇಶ ವಗ್ಗನ್ನವರ, ಎನ್.ಎಂ. ಹರನಾಳ, ರೇಣುಕಾ ಕೋಟ್ಯಾಳ, ಸಿಸ್ಟರ್ ಸಿಂಥಿಯಾ ಪೆರಾರಿ, ಕಾಮಿನಿ ಕಸಬೆ, ಶೋಭಾ ವಾಲಿಕಾರ, ಶ್ರೀಧರ ಕೊಣ್ಣೂರ, ಗೀತಾ ಕಟ್ಟಿ, ರವಿ ಕಟ್ಟಿಮನಿ, ಜಯಶ್ರೀ ಚಲವಾದಿ, ಸುನೀತಾ ಮೋರೆ, ಚಂದು ಜಾಧವ, ಸರೋಜಾ ಕಟ್ಟಿಮನಿ, ಶಾಂತಾ ಹೊಸಮನಿ, ಹಮಿದಾ ಪಟೇಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net