ಬಸ್, ಅಗತ್ಯ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

10blrp1
ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ(ಪ್ರವೀಣ್‌ಶೆಟ್ಟಿ) ಬಣದ ಕಾರ್ಯಕರ್ತರು ಬೇಲೂರಿನ ಬಸ್ ನಿಲ್ದಾಣದ ಟಿಸಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ರಾಘವೇಂದ್ರ ಹೊಳ್ಳ, ಮಂಜು ಆಚಾರ್, ಸತೀಶ್, ನವೀನ್, ಹುಸೇನ್, ರತ್ನಾಕರ್ ಇತರರಿದ್ದರು.
Published on

ಬೇಲೂರು: ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ(ಪ್ರವೀಣ್‌ಶೆಟ್ಟಿ) ಬಣದ ಕಾರ್ಯಕರ್ತರು ಬಸ್ ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್(ಟಿಸಿ)ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿದರು.

ಕರವೇ ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ ಮಾತನಾಡಿ, ಬೇಲೂರು ಪ್ರವಾಸಿ ತಾಣ. ಇಲ್ಲಿನ ಬಸ್ ನಿಲ್ದಾಣಕ್ಕೆ ಪ್ರವಾಸಿಗರು ಸೇರಿದಂತೆ ವಿದ್ಯಾರ್ಥಿಗಳು, ಸ್ಥಳೀಯ ಪ್ರಯಾಣಿಕರು ಆಗಮಿಸುತ್ತಾರೆ. ಬಸ್ ನಿಲ್ದಾಣದಿಂದ ವಿವಿಧ ಊರುಗಳಿಗೆ ಪ್ರತಿನಿತ್ಯ ಸಾವಿರಾರು ಜನ ಪ್ರಯಾಣಿಕರು ಸಂಚರಿಸುತ್ತಾರೆ. ಜತೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೊರಡುವ ಸಂದರ್ಭ ಸಮಯಕ್ಕೆ ಸರಿಯಾದ ಬಸ್‌ಗಳಿಲ್ಲ. ನಿಲ್ದಾಣದೊಳಗೆ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಮಾರ್ಗಸೂಚಿ ಫಲಕಗಳಿರಬೇಕಾದ ಜಾಗದಲ್ಲಿ ಜಾಹೀರಾತು ಫಲಕಗಳಿವೆ. ಶುದ್ಧ ಕುಡಿಯುವ ನೀರಿಲ್ಲ. ಸೊಳ್ಳೆಗಳ ತಾಣವಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ನಿಲ್ದಾಣದಲ್ಲಿರುವ ಅಧಿಕಾರಿಗಳನ್ನು ಕೇಳಿದರೆ ಅವರು ಉಡಾಫೆ ಉತ್ತರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರವೇ ಕಾರ್ಯದರ್ಶಿ ಜಯಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದಿಂದ ಶಾಲಾ-ಕಾಲೇಜು, ಇತರ ಕೆಲಸ ಕಾರ್ಯಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡದ ಕಾರಣ ಸಮಸ್ಯೆಯಾಗುತ್ತಿದೆ. ಇಲ್ಲಿನ ಅಧಿಕಾರಿಗಳಿಗೆ ತಿಳಿಸಿದರೆ ಏನು ಬೇಕಾದರೂ ಮಾಡಿಕೊಳ್ಳಿ ಎನ್ನುತ್ತಾರೆ. ಆದ್ದರಿಂದ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದರು.

ಕರವೇ ಉಪಾಧ್ಯಕ್ಷ ರಾಘವೇಂದ್ರ ಹೊಳ್ಳ, ಮಂಜು ಆಚಾರ್, ಯುವ ಘಟಕದ ಅಧ್ಯಕ್ಷ ಸತೀಶ್, ಪದಾಧಿಕಾರಿಗಳಾದ ನವೀನ್, ಹುಸೇನ್, ರತ್ನಾಕರ್, ಮಂಜುನಾಥ್, ಕೋಳಿ ಚಂದ್ರು, ದೇವು, ಪ್ರಸಾದ್, ಸಲ್ಮಾನ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net