

ಮಂಡ್ಯ: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಜನಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ತೆರಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ಕುಳಿತರು. ಶ್ರೀರಂಗಪಟ್ಟಣದಲ್ಲಿ ನಡೆದ ಸಂಕೀರ್ತನಾ ಯಾತ್ರೆಯ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನ, ದ್ವೇಷ ಭಾಷಣ ಮಾಡಿದ್ದಾರೆ. ಸ್ಥಳದಲ್ಲೇ ಪೊಲೀಸರು ಇದ್ದರೂ ಅವರನ್ನು ಬಂಧಿಸದೆ ನಿರ್ಲಕ್ಷೃ ತೋರಿದ್ದಾರೆ. ಕಾಂಗ್ರೆಸ್ ಸರ್ಕಾರ ಅವರ ಪರವಾಗಿ ನಿಂತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಮಂಡ್ಯದಂತಹ ಸೌಹಾರ್ಧ ನೆಲದಲ್ಲಿ ಅಶಾಂತಿ ಉಂಟುಮಾಡುವ ಯಾವುದೇ ಅವಕಾಶವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸರ್ಕಾರ ನೀಡಬಾರದು. ಇಂತಹ ವೇದಿಕೆಯಲ್ಲಿ ಬಹಿರಂಗವಾಗಿ ದ್ವೇಷ ಭಾಷಣ ಮಾಡಿದ ಎಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎ.ಎಲ್.ಕೆಂಪೂಗೌಡ, ಕನ್ನಲಿಕೃಷ್ಣ, ದೇವಿ, ಡಿ.ಕೆ.ಲತಾ, ಸುಶೀಲಾ, ಶೋಭಾ, ಮಂಜುಳಾ, ಎನ್.ಎಲ್.ಭರತ್‌ರಾಜ್, ಸಿ.ಕುಮಾರಿ, ಪೂರ್ಣಿಮಾ, ಚಂದ್ರು ಶಿವಳ್ಳಿ, ಲತಾ ಇತರರಿದ್ದರು.