ಪಾಕ್ ಸರ್ಕಾರದ ವಿರುದ್ಧ ಪ್ರತಿಭಟನೆ; ಪಿಒಕೆಯಲ್ಲಿ ಬೀದಿಗಿಳಿದ ಸಾವಿರಾರು ಮಂದಿ; ಇಬ್ಬರ ಸಾವು, 22 ಜನರಿಗೆ ಗಾಯ

ಸಸ
Published on

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಇಬ್ಬರು ಮೃತಪಟ್ಟಿದ್ದು 22 ಜನರು ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿ (ಜೆಕೆಜೆಎಎಸಿ) ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ಆರಂಭವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮಿರ್​ಪುರ, ಕೋಟ್ಲಿ, ರಾವಲಕೋಟ್, ನೀಲಂ ಕಣಿವೆ, ಕರನ್ ಸೇರಿದಂತೆ ದೊಡ್ಡ ಮತ್ತು ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಪಾಕ್ ಸರ್ಕಾರದ ವಿರುದ್ಧ ಸಾವಿರಾರು ಜನರು ಘೋಷಣೆ ಕೂಗಿದ್ದಾರೆ. ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಇಬ್ಬರು ಮೃತಪಟ್ಟಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ಜೆಕೆಜೆಎಎಸಿ ಪಾಕ್ ಆಕ್ರಮಿತ ಕಾಶ್ಮೀರದ ಸರ್ಕಾರದ ಮುಂದೆ 38 ಅಂಶಗಳ ಬೇಡಿಕೆಯ ಪಟ್ಟಿ ಇರಿಸಿದೆ. ಆಡಳಿತದಲ್ಲಿ ಗಣ್ಯರಿಗೆ ನೀಡಲಾಗಿರುವ ಸವಲತ್ತುಗಳನ್ನು ತೆಗೆದುಹಾಕುವುದು, ಪಿಒಕೆಯ ವಿಧಾನಸಭೆಯಲ್ಲಿ ಭಾರತದಿಂದ ವಲಸೆ ಹೋಗಿರುವ ಕಾಶ್ಮೀರಿಗರಿಗೆ ಮೀಸಲಿರಿಸಿರುವ 12 ಸ್ಥಾನಗಳನ್ನು ಕೊನೆಗೊಳಿಸುವುದು ಮತ್ತು ಪಿಒಕೆಯ ಜಲವಿದ್ಯುತ್ ಯೋಜನೆಗಳಿಗೆ ರಾಯಲ್ಟಿ ನೀಡುವುದನ್ನು ಕೊನೆಗೊಳಿಸಬೇಕು. ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ವಿತರಿಸಬೇಕು, ಪಾಕ್ ಸರ್ಕಾರ ನೀಡಿರುವ ಭರವಸೆಗಳನ್ನು ತ್ವರಿತವಾಗಿ ಈಡೇರಿಸಬೇಕು ಎಂದು ಜೆಕೆಜೆಎಎಸಿ ಈ ಪಟ್ಟಿಯಲ್ಲಿ ಆಗ್ರಹಿಸಿದೆ.

ಬೇಡಿಕೆ ಈಡೇರಿಕೆ ಸಂಬಂಧ ಪಿಒಕೆ ಸರ್ಕಾರ ಮತ್ತು ಆವಾಮಿ ಕ್ರಿಯಾ ಸಮಿತಿಯ ಸದಸ್ಯರು ಸುಮಾರು 13 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಮಿತಿ ಪ್ರತಿಭಟನೆಗೆ ಕರೆ ನೀಡಿ, ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ. 70 ವರ್ಷಗಳಿಗೂ ಹೆಚ್ಚು ಕಾಲದಿಂದ ನಮ್ಮ ಜನರಿಗೆ ನಿರಾಕರಿಸಲ್ಪಟ್ಟ ಮೂಲಭೂತ ಹಕ್ಕುಗಳಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಹಕ್ಕುಗಳನ್ನು ನಮಗೆ ನೀಡಿ, ಇಲ್ಲವೇ ನಮ್ಮ ಕೋಪವನ್ನು ಎದುರಿಸಿ ಎಂದು ಕ್ರಿಯಾ ಸಮಿತಿಯ ನಾಯಕ ಶೌಕತ್ ನವಾಜ್ ಮಿರ್ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಆವಾಮಿ ಕ್ರಿಯಾ ಸಮಿತಿ ಸಂಪೂರ್ಣ ಲಾಕ್​ಡೌನ್​ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆಗಳು ಸೇರಿದಂತೆ ಎಲ್ಲ ಚಟುವಟಿಕೆಗಳೂ ಸ್ಥಬ್ದವಾಗಿವೆ, ಪ್ರತಿಭಟನಾಕಾರರು ರಸ್ತೆಗಳನ್ನು ಮುಚ್ಚಿದ್ದು, ವಾಹನ ಸಂಚಾರವನ್ನು ತಡೆದಿದ್ದಾರೆ.

ಸರ್ಕಾರಿ ವಿರೋಧಿ ಪ್ರತಿಭಟನೆ ಪಿಒಕೆಯ ಬಹುತೇಕ ಭಾಗಗಳಿಗೆ ವ್ಯಾಪಿಸಿದ್ದು, ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ದದ್ಯಾಲ್ ಮತ್ತು ಪ್ರಧಾನಿ ಅನ್ವರ್ ಹಕ್​ರ ಕ್ಷೇತ್ರ ಭಿಂಬರ್​ನಲ್ಲಿ ಹಾಗೂ ಕೋಟ್ಲಿ ಜಿಲ್ಲೆಯಲ್ಲಿಯೂ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಹಿನ್ನೆಲೆ

ಪ್ರಸ್ತುತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೂಲ 2023ರಲ್ಲಿದೆ. ಅಂದು ಪಾಕಿಸ್ತಾನ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಿದ್ಯುತ್ ದರ ಏರಿಕೆ ಮಾಡಿತ್ತು ಮತ್ತು ಗೋಧಿಯ ಮೇಲಿನ ಸಬ್ಸಿಡಿ ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜನರಲ್ಲಿ ಅಸಮಾಧಾನ ಹೊಗೆಯಾಡುತ್ತಿತ್ತು. ಈಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮಿರ್​ಪುರದಲ್ಲಿರುವ ಮಂಗಳಾ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದಿಸಲಾಗತ್ತದೆ. ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದನೆಯಾದರೂ ನಮಗೆ ದುಬಾರಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 2022ರಲ್ಲೂ ಪ್ರತಿಭಟನೆ ನಡೆದಿತ್ತು. ಅಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ಸರಿಪಡಿಸಲು 15ನೇ ತಿದ್ದುಪಡಿ ತರುವ ಯೋಜನೆಗೆ ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಅಂದು ಪಾಕ್ ವಿರೋಧಿ ಘೋಷಣೆಗಳನ್ನೂ ಕೂಗಿದ್ದ ಪ್ರತಿಭಟನಾಕಾರರು ಪಾಕಿಸ್ತಾನದಿಂದ ತಮಗೆ ಸ್ವಾತಂತ್ರ್ಯ ಬೇಕು ಎಂದು ಒತ್ತಾಯಿಸಿದ್ದರು.

ಇಂಟರ್​ನೆಟ್ ಸಂಪರ್ಕ ಕಡಿತ

ಪಿಒಕೆಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶೆಹಬಾಜ್ ಷರೀಪ್ ಸರ್ಕಾರ ಪಿಒಕೆಯಲ್ಲಿ ಫೋನ್ ಮತ್ತು ಬ್ರಾಡ್​ಬ್ಯಾಂಡ್ ಮತ್ತು ಮೊಬೈಲ್ 2ಜಿ ಇಂಟರ್ನೆಟ್ ಕಡಿತಗೊಳಿಸಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪಂಜಾಬ್ ಪೊಲೀಸ್, ಪಾಕ್ ರೇಂಜರ್​ಗಳು ಸೇರಿ 2000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಪಿಒಕೆಯಲ್ಲಿ ನಿಯೋಜಿಸಲಾಗಿದೆ. ಅರೆಸೈನಿಕ ಪಡೆಗಳು ಸಹ ಪಿಒಕೆ ತಲುಪಿವೆ. ಪಿಒಕೆಗೆ ತೆರಳುವ ಎಲ್ಲ ಮಾರ್ಗಗಳನ್ನು ಮುಚ್ಚಲಾಗಿದ್ದು, ಹಲವು ಹಂತದ ಚೆಕ್​ಪೋಸ್ಟ್​ಗಳನ್ನೂ ಸ್ಥಾಪಿಸಲಾಗಿದೆ. ಆವಾಮಿ ಕ್ರಿಯಾ ಸಮಿತಿಯ ಕೆಲವು ನಾಯಕರನ್ನು ಬಂಧಿಸಲಾಗಿದೆ ಅಥವಾ ಅಪಹರಿಸಿದ್ದು, ಈ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ.

ಪಿಟಿಐ ಬೆಂಬಲ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಸಹ ಬೆಂಬಲ ನೀಡಿದ್ದು, ಪಿಒಕೆ ಸರ್ಕಾರದ ಪ್ರಧಾನ ಮಂತ್ರಿ ಚೌಧರಿ ಅನ್ವರ್ ಉಲ್ ಹಕ್ ಒಬ್ಬ ಅಸಮರ್ಥ ಮತ್ತು ದಮನಕಾರಿ ನಾಯಕ ಎಂದು ಆರೋಪಿಸಿದ್ದು, ಇಡೀ ಮಿರ್​ಪುರ ತನ್ನ ಹಕ್ಕುಗಳಿಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ ಎಂದು ಕಿಡಿ ಕಾರಿದೆ. ಪ್ರತಿಭಟನಾನಿರತರ ಮೇಲೆ ಸರ್ಕಾರಿ ಬೆಂಬಲಿತ ಗೂಂಡಾಗಳು ಗುಂಡು ಹಾರಿಸುತ್ತಿದ್ದಾರೆ. ಇದರಿಂದಾಗಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ಪಿಟಿಐ ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net