ವಿಜಯಪುರ: ಬಸ್ ಪ್ರಯಾಣ ದರ ಏರಿಕೆ ಹಾಗೂ ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಹಲಗೆ ಮೇಳದೊಂದಿಗೆ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕುಪನೂರ ಸೊಲ್ಲಾಪುರದ ಹಂತಕರನ್ನು ಕರೆತಂದು ನಮ್ಮ ಪಕ್ಷದ ಮುಖಂಡರು ಹಾಗೂ ಓರ್ವ ಸ್ವಾಮೀಜಿಯವರ ಹತ್ಯೆಗೆ ಸಂಚು ರೂಪಿಸಿರುವುದು ಬಹಿರಂಗವಾಗಿದೆ. ಆತನ ಹೆಸರು ಉಲ್ಲೇಖವಾಗಿದೆ. ಆದರೂ ಸಚಿವರು ನನ್ನ ಹೆಸರು ಡೆತ್ ನೋಟ್‌ನಲ್ಲಿ ಇಲ್ಲ ಎಂದು ವಾದಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟ್‌ನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾಗಿ ಪ್ರಕರಣದ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆಯವರು ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕೆಂದು ಆಗ್ರಹಿಸಿದರು.
ಅಲ್ಲದೇ ಸಾರಿಗೆ ಇಲಾಖೆ ಬಸ್ ಗಳ ಟಿಕೇಟ್ ದರ ಶೇ.15 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಸರ್ಕಾರದ ಕ್ರಮ ಖಂಡಿಸಿದ ಕೂಚಬಾಳ ಅವರು, ತಕ್ಷಣ ಬಸ್ ಟಿಕೇಟ್ ದರ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕೋಳಕೂರ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ಮಲ್ಲಿಕಾರ್ಜುನ ಜೋಗೂರ, ಶಂಕರ ಹೂಗಾರ, ಚಿದಾನಂದ ಚಲವಾದಿ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಸಾಬು ಮಾಶ್ಯಾಳ, ಚಂದ್ರಶೇಖರ ಕವಟಗಿ, ಸಂಧ್ಯಾ ಪಾಟೀಲ ಕನಮಡಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಜು ಮಗಿಮಠ, ರಾಹುಲ ಜಾಧವ, ವಿಠಲ ಹೊಸಪೇಟ, ಭರತ ಕೋಳಿ, ಮಹೇಶ ವಡೆಯರ್, ಕಾಂತು ಶಿಂಧೆ, ವಿಜಯ ಜೋಶಿ, ರಾಜೇಶ ತವಸೆ, ಸಂತೋಷ ಪಾಟೀಲ ಡೊಂಬಳ, ಮಲ್ಲಿಕಾರ್ಜುನ ಕಿವಡೆ, ಸಂತೋಷ ಕುರದಡ್ಡಿ, ಮಲ್ಲು ಶಿರಮಗೊಂಡ, ಬಸವರಾಜ ಹೂಗಾರ, ಶೀಲವಂತ ಉಮರಾಣಿ, ಶರಣಬಸು ಕುಂಬಾರ, ಸಿದ್ದಲಿಂಗಪ್ಪ ಮಖಣಾಪೂರ, ಪಾಪುಸಿಂಗ್ ರಜಪೂತ, ಕೃಷ್ಣಾ ಚವಾಣ್,ನೀಲಕಂಠ ಕಂದಗಲ್, ಮಲ್ಲು ಕಲಾದಗಿ, ಭರತ ಕುಲಕರ್ಣಿ, ಪ್ರವೀಣ ವಂದಾಲಮಠ, ಪ್ರವೀಣ ನಾಟೀಕಾರ, ರಾಚು ಬಿರಾದಾರ, ಪ್ರವೀಣ ಕೂಡಗಿ, ಪ್ರಶಾಂತ ಮಾವಿನಗಿಡದ, ಪ್ರೇಮ ನಂದು ಗಡಗಿ ಮತ್ತಿತರರಿದ್ದರು.