

ಸುಬ್ರಹ್ಮಣ್ಯ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಪಂಚಾಯಿತಿ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸದೆ ಪುನಃ ಕರ್ತವ್ಯಕ್ಕೆ ನೇಮಕ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಕೊಲ್ಲಮೊಗ್ರು ಗ್ರಾಪಂ ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ತನಿಖೆ ಮುಗಿಯದೆ ಅಮಾನತುಗೊಂಡವರನ್ನು ನೇಮಕ ಮಾಡುವುದು ಪಾರದರ್ಶಕ ಆಡಳಿತಕ್ಕೆ ಧಕ್ಕೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊಲ್ಲಮೊಗ್ರು ಗ್ರಾಪಂ ನೌಕರ ಸಂತೋಷ್ ಈ ಹಿಂದೆ ಪಂಚಾಯಿತಿ ಪೀಠೋಪಕರಣಗಳನ್ನು ಕಳವು ಮಾಡಿದ ಬಗ್ಗೆ ಹಾಗೂ ಪ್ರಕೃತಿ ವಿಕೋಪದಲ್ಲಿ ಬಂದ ಹಣವನ್ನು ದುರುಪಯೋಗಪಡಿಸಿ ತಹಸೀಲ್ದಾರರ ನಕಲು ಸಹಿ ಮಾಡಿ ಹಣ ಬಟಾವಡೆ ಮಾಡಿದ ಬಗ್ಗೆ ಹಾಗೂ ಈವರೆಗೆ ಭ್ರಷ್ಟಾಚಾರ, ಅವ್ಯವಹಾರ ನಡೆಸಿದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಡೀ ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸಬೇಕು ಎಂಬುದಾಗಿ ಗ್ರಾಪಂಗೆ ಮನವಿ ಸಲ್ಲಿಸಲಾಯಿತು.
ವಕೀಲ ಪ್ರದೀಪ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ಟಿ.ಎನ್., ಪ್ರಮುಖರಾದ ಉದಯ ಶಿವಾಲ, ಡ್ಯಾನಿ ಯಾಳದಾಳು, ವೀಣಾನಂದ, ಶೇಖರ್ ಅಂಬೆಕಲ್ಲು, ಹರಿಪ್ರಸಾದ್ ನಾಯರ್ ಮಲ್ಲಾಜೆ, ಗಿರೀಶ್, ರಕ್ಷಿತ್ ಡಿ., ಸುರೇಶ್, ಭರತ್, ಪ್ರಶಾಂತ್ ಎ.ಸಿ., ಸತೀಶ್ ಟಿ.ಎನ್., ಹರೀಶ್ ಬಲ್ಲಡ್ಕ, ಹೇಮಂತ್ ದೋಲನ, ಗಣೇಶ ಶಿವಾಲ ಮೊದಲಾದವರಿದ್ದರು.