ಉಡುಪಿಯ ರಸ್ತೆ ಬದಿಯಲ್ಲಿ ಮಲಗಿದ್ದ ಮಹಿಳೆಯ ರಕ್ಷಣೆ

UDP-6-3-Laxmi
ರಸ್ತೆಯ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ವಿಶು ಶೆಟ್ಟಿ ರಕ್ಷಿಸಿದರು. ಪೊಲೀಸ್​ ಮಹಿಳಾ ಸಿಬ್ಬಂದಿ ಎಚ್​.ಸಿ. ಮಲ್ಲಿಕಾ ಸಹಕರಿಸಿದರು.
Published on

ಮನನೊಂದು ಊರು ಬಿಟ್ಟು ಬಂದ ರಾಯಚೂರು ಮೂಲದ ಲಕ್ಷ್ಮೀ

ಉಡುಪಿ: ಮಾನಸಿಕ ಆಘಾತದಿಂದ ನೊಂದು ಉಡುಪಿ ಬನ್ನಂಜೆಯ ಮುಖ್ಯರಸ್ತೆಯ ಬದಿಯಲ್ಲಿ ಗುರುವಾರ ರಾತ್ರಿ ಮಲಗಿದ್ದ ಮಹಿಳೆಯೋರ್ವಳನ್ನು ಸಮಾಜಸೇವಕ ವಿಶು ಶೆಟ್ಟಿ ರಕ್ಷಿಸಿದ್ದು, ಮಹಿಳಾ ಪೊಲೀಸರ ಸಹಾಯದಿಂದ ಸಖಿ ಸೆಂಟರ್​ಗೆ ದಾಖಲಿಸಿದ್ದಾರೆ.

ರಕ್ಷಣಾ ಸಮಯದಲ್ಲಿ ಮಹಿಳೆಯು ತಾನು ರಾಯಚೂರು ಮೂಲದವಳಾಗಿದ್ದು, ತನ್ನ ಹೆಸರು ಲಕ್ಷ್ಮೀ (25) ಎಂದು ತಿಳಿಸಿದ್ದಾಳೆ. ಮದುವೆಯಾಗಿ ಮಕ್ಕಳಿಲ್ಲದ್ದರಿಂದ ಹಿಂಸೆ ಅನುಭವಿಸುತ್ತಿದ್ದು, ನೊಂದು ಊರುಬಿಟ್ಟು ಬಂದಿರುವುದಾಗಿ ಮಾಹಿತಿ ನೀಡಿದ್ದಾಳೆ.

ರಸ್ತೆ ಬದಿಯಲ್ಲಿ ಅಸಹಾಯಕಳಾಗಿದ್ದ ಈಕೆಯನ್ನು ಗಮನಿಸಿದ ಶ್ರೀಕಾಂತ್​ ಶೆಟ್ಟಿ ಕಾರ್ಕಳ ಎಂಬವರು, ಮಹಿಳೆಯೊಂದಿಗೆ ಯಾವುದೇ ದುರಂತ ಸಂಭವಿಸಬಾರದೆಂದು ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು. ವಿಶು ಶೆಟ್ಟಿ ಹಾಗೂ ಪೊಲೀಸರು ಆಗಮಿಸುವವರೆಗೆ ಸ್ಥಳದಲ್ಲಿಯೇ ನಿಂತಿದ್ದರು. ಮಹಿಳೆಯ ರಕ್ಷಣಾ ಕಾರ್ಯದಲ್ಲಿ ಪೊಲೀಸ್​ ಮಹಿಳಾ ಸಿಬ್ಬಂದಿ ಎಚ್​.ಸಿ. ಮಲ್ಲಿಕಾ ಸಹಕರಿಸಿದರು.

ಮಹಿಳೆಯ ಸಂಬಂಧಿಕರು ಅಥವಾ ಮಾಹಿತಿ ಇರುವವರು ಉಡುಪಿ ಮಹಿಳಾ ಠಾಣೆ ಅಥವಾ ಸಖಿ ಸೆಂಟರ್​ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net