ಕುಂದಾಪುರ: ಮಕ್ಕಳ ಹಕ್ಕು, ರಕ್ಷಣೆ, ಸುರಕ್ಷತೆಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಆದ್ಯತೆ ವಹಿಸಬೇಕು. ಸರ್ಕಾರದ ಸುತ್ತೋಲೆಗಳನ್ನು ಸರಿಯಾಗಿ ಅನುಷ್ಠಾನಿಸಬೇಕು. ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಮಕ್ಕಳ ರಕ್ಷಣಾ ಸಮಿತಿ ಸದಾ ಕ್ರಿಯಾಶೀಲವಾಗಿರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ಕುಂದಾಪುರ ತಾಪಂನಲ್ಲಿ ಮಂಗಳವಾರ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಎಲ್ಲ ಶಾಲೆ, ಕಾಲೇಜುಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ರಚನೆಯಾಗಬೇಕು. ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ಪ್ರತ್ಯೇಕ ಕಡತ ಇರಬೇಕು. ಮಕ್ಕಳ ರಕ್ಷಣೆ ಬೇರೆ, ಮಕ್ಕಳ ಹಕ್ಕುಗಳ ರಕ್ಷಣೆ ಬೇರೆ. ತಳಹಂತದಲ್ಲಿ ಯಾವ ಮಟ್ಟದಲ್ಲಿ ಕಾರ್ಯನಿರ್ವಹಣೆಯಾಗುತ್ತಿದೆ ಎಂದು ಪರಿಶೀಲಿಸಲು ರಾಜ್ಯದ ಆಯ್ದ ತಾಲೂಕುಗಳಲ್ಲಿ ಸಭೆ ನಡೆಸಲಾಗುತ್ತಿದೆ. ವಂಡ್ಸೆ, ಕುಂದಾಪುರ ಜೂನಿಯರ್ ಕಾಲೇಜಿಗೆ ಭೇಟಿ ನೀಡಿದಾಗ ಅನೇಕ ಲೋಪದೋಷ ಕಂಡುಬಂದಿವೆ ಎಂದರು.
ಖಾಸಗಿ ಶಾಲೆ ವಾಹನ ಚಾಲಕರ ಬಗ್ಗೆ ಗಮನ ಹರಿಸಬೇಕು, ಪೊಲೀಸ್ ಇಲಾಖೆ ಜಂಟಿಯಾಗಿ ಖಾಸಗಿ ಶಾಲಾ ವಾಹನಗಳ ಚಾಲಕರ ಸಭೆ ಕರೆಯಿರಿ, ಶಾಲಾ ವಾಹನದಲ್ಲಿ ಮಹಿಳಾ ಆಯಾ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದು ಸೂಚಿಸಿದರು. 50 ಮಕ್ಕಳಿಗೆ ಒಂದು ಸಲಹಾ ಪೆಟ್ಟಿಗೆ ಇರಬೇಕು ಎನ್ನುವ ನಿಯಮವಿದೆ. ಸಿಸಿ ಕ್ಯಾಮರಾದ ಕಣ್ಗಾವಲು ಇಲ್ಲದ ಪ್ರದೇಶದಲ್ಲಿ ಸಲಹಾ ಪೆಟ್ಟಿಗೆ ಇಡಬೇಕು. ಮಕ್ಕಳ ರಕ್ಷಣಾ ಸಭೆಯಲ್ಲಿಯೇ ಸಲಹಾ ಪೆಟ್ಟಿಗೆ ತೆರೆಯಬೇಕು. ಶಾಲೆ, ಮೈದಾನ, ಹಾಸ್ಟೆಲ್ ಪಕ್ಕದಲ್ಲಿ ವಿದ್ಯುತ್ ತಂತಿಗಳು ಹಾದುಹೋಗದಂತೆ ಮಾಡಬೇಕು. ಇದ್ದರೆ ತೆರವು ಮಾಡಬೇಕು ಎಂದರು.
ಸಾಮಾಜಿಕ ಜಾಲತಾಣ ಬಳಕೆಯಿಂದಾಗಿ ಹದಿಹರಯದವರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೊ ಪ್ರಕರಣ ಹೆಚ್ಚಾಗುತ್ತಿವೆ. ಶಾಲಾ, ಕಾಲೇಜು, ಹಾಸ್ಟೆಲ್‌ಗಳಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿಸಿ ಮಕ್ಕಳ ಸಹಾಯವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ರಾಜ್ಯದಲ್ಲಿ ಕಳೆದ ವರ್ಷ ಅಪ್ರಬುದ್ಧ ವಯಸ್ಸಿನ 1.3 ಲಕ್ಷ ಮಂದಿ ಗರ್ಭಿಣಿಯರಾಗಿದ್ದು ಉಡುಪಿ ಜಿಲ್ಲೆ 11 ಪ್ರಕರಣ ದಾಖಲಿಸಿದೆ. ಅದಕ್ಕೂ ಹಿಂದಿನ ವರ್ಷ ಉಡುಪಿಯಲ್ಲಿ 86 ಪ್ರಕರಣಗಳಾಗಿದ್ದವು ಎಂದರು.
ಪಿಯು ಜಿಲ್ಲಾ ಉಪನಿರ್ದೇಶಕ ಮಾರುತಿ, ಎಲ್ಲ ಕಾಲೇಜುಗಳಿಗೆ ಸಹಾಯವಾಣಿ ನಂಬರ್ ಪ್ರದರ್ಶಿಸುವಂತೆ, ಸಮಿತಿ ರಚಿಸುವಂತೆ ಸೂಚಿಸಲಾಗಿದೆ. ರಚನೆಯಾಗದೇ ಇದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ್, ಹಾಸ್ಟೆಲ್‌ಗಳಲ್ಲಿ ಸಹಾಯವಾಣಿ ನಂಬರ್ ಹಾಕಲಾಗಿದೆ. ಟ್ಯೂಷನ್ ವ್ಯವಸ್ಥೆ ಮಾಡಲಾಗಿದೆ. ಸಲಹೆ ಪೆಟ್ಟಿಗೆ ಇಡಲಾಗಿದೆ ಎಂದರು.
ಕಾರ್ಮಿಕ ನಿರೀಕ್ಷಕ ಜಯೇಂದ್ರ, ಕುಂದಾಪುರ, ಬೈಂದೂರಿನಲ್ಲಿ 29 ಸಾವಿರ ಕಟ್ಟಡ ಕಾರ್ಮಿಕರು ನೊಂದಾಯಿಸಿದ್ದು ರಾಜ್ಯದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿದ್ದವರ ಪೈಕಿ 43 ಲಕ್ಷ ನಕಲಿ ಕಾರ್ಡ್‌ಗಳಿದ್ದ ಕಾರಣ ತಡೆ ಹಿಡಿಯಲಾಗಿತ್ತು. ಈಗ ಹೊಸದಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬಾಲಕಾರ್ಮಿಕರ ದೂರು ಬಂದಲ್ಲಿಗೆ ದಾಳಿ ನಡೆಸಲಾಗಿದೆ ಎಂದರು.
ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಶಾಲೆಯಿಂದ ಹೊರಗುಳಿದ 23 ಮಕ್ಕಳಿದ್ದು 7 ಮಂದಿ ಮರಳಿ ಶಾಲೆಗೆ ಬರುತ್ತಿದ್ದಾರೆ. 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ. 1 ವಲಸೆ ಮಗುವಾಗಿದ್ದು ಅಲ್ಲಿನ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. 3 ಜನರಿಗೆ ಅನಾರೋಗ್ಯವಿದೆ. ಪ್ರತಿ ಶಾಲೆಗಳಲ್ಲೂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ರಚಿಸಿ ಸಭೆ ನಡೆಸಲು ಸೂಚಿಸಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಕೆ., 1 ಶಿಶು ಮರಣ, 1 ತಾಯಿ ಮರಣ ಪ್ರಕರಣ ದಾಖಲಾಗಿದೆ. ಗಂಡಾಂತರಕಾರಿ ಹೆರಿಗೆ ಎಂದು ಗುರುತಿಸಲ್ಪಟ್ಟದ್ದನ್ನು 108 ಆಂಬುಲೆನ್ಸ್‌ಗೆ ಮಾಹಿತಿ ನೀಡಲಾಗಿರುತ್ತದೆ. ಆಶಾ ಕಾರ್ಯಕರ್ತೆಯರು ನಿಗಾ ಇಟ್ಟಿರುತ್ತಾರೆ. ಶೇ.30 ಪ್ರಕರಣಗಳು ಇಂತಹ ವ್ಯಾಪ್ತಿಯಲ್ಲಿದೆ. ಶೇ.60 ಸಿಸೇರಿಯನ್ ಪ್ರಕರಣ ಇರುತ್ತವೆ. 35ರ ನಂತರ ಗರ್ಭಿಣಿಯಾಗುವುದು, ತಡವಾಗಿ ಮದುವೆಯಾಗಿರುವುದು, ಚಿಕಿತ್ಸೆ ಮೂಲಕ ಗರ್ಭಿಣಿಯಾಗಿರುವ ಕಾರಣದಿಂದ ಗಂಡಾಂತರಕಾರಿ ಹೆರಿಗೆ ಕೇಸ್ ಕಂಡುಬರುತ್ತಿದ್ದು ಇಂತಹ ಪ್ರಕರಣಗಳ ಕುರಿತಾಗಿಯೂ ನಿಗಾ ಇಡಲಾಗುತ್ತದೆ ಎಂದರು. ಸ್ನೇಹ ಕ್ಲಿನಿಕ್ ಮೂಲಕ ಕೌನ್ಸಲಿಂಗ್ ಕೂಡ ಲಭ್ಯವಿದೆ. ಕುಂದಾಪುರ, ಬೈಂದೂರಿನಲ್ಲಿ ಕೌನ್ಸಿಲರ್‌ಗಳು ಲಭ್ಯರಿದ್ದಾರೆ ಎಂದರು.
ತಾಪಂ ಅಧೀಕ್ಷಕ ರಾಮಚಂದ್ರ ಮಯ್ಯ, ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತಿದೆ ಎಂದರು. ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ಉಪಸ್ಥಿತರಿದ್ದರು.
ಸಹಾಯವಾಣಿ ಫಲಕ ಕಡ್ಡಾಯ
ವಿದ್ಯಾಂಗ ಉಪ ನಿರ್ದೇಶಕರು, ಶಿಕ್ಷಣಾಧಿಕಾರಿಗಳು ಮಕ್ಕಳ ರಕ್ಷಣೆ ಹಕ್ಕುಗಳ ಬಗ್ಗೆ ಸರ್ಕಾರದ ಸುತ್ತೋಲೆ ಕಡ್ಡಾಯವಾಗಿ ಪಾಲಿಸುವಂತೆ ಶಾಲೆಗಳಿಗೆ ಸೂಚನೆ ನೀಡಬೇಕು. ಶಾಲೆ, ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿ ಫಲಕ ಕಡ್ಡಾಯವಾಗಿ ಪ್ರದರ್ಶಿಸಬೇಕು, ಜೆರಾಕ್ಸ್ ಪ್ರತಿ ಅಂಟಿಸಬಾರದು. ಮಕ್ಕಳ ರಕ್ಷಣೆ ವಿಚಾರದಲ್ಲಿ ಸೂಕ್ತ ತರಬೇತಿ ನೀಡಬೇಕು, ಪಾಲನೆ ಮಾಡದವರಿಗೆ ನೋಟಿಸ್ ನೀಡಿ ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು. ಸಹಾಯವಾಣಿ ಸಂಖ್ಯೆ ಪ್ರದರ್ಶಿಸುವುದರ ಜತೆಗೆ ಯಾಕೆ, ಹೇಗೆ, ಯಾರು, ಯಾವಾಗ ಸಂಪರ್ಕಿಸಬಹುದು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ ಮಕ್ಕಳು ಕರೆ ಮಾಡುವಂತೆ ಜಾಗೃತಿ ಮೂಡಿಸಬೇಕು.