ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಚಿಸಿದ್ದ ಮೊದಲ ಬಡಾವಣೆ ಜಯನಗರ ಬಡಾವಣೆಯ ಒಂದನೇ ಬ್ಲಾಕಿನಲ್ಲಿರುವ ಸಿದ್ಧಾಪುರ ಗ್ರಾಮಕ್ಕೆ ಸೇರಿರುವ 30 ಗುಂಟೆ ಜಾಗವನ್ನು, ಸಂಸ್ಥೆಯ ಕೆಲ ಅಧಿಕಾರಿಗಳು ಹಾಗೂ ಸಬ್ ರಿಜಿಸ್ಟ್ರಾರ್ ಅವರು ಖಾಸಗಿ ಬಿಲ್ಡರ್ ಒಬ್ಬರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. 100 ಕೋಟಿ ರೂ. ಆಸ್ತಿಯನ್ನು ರಕ್ಷಿಸದೆ ಖಾಸಗಿ ವ್ಯಕ್ತಿಗಳೊಂದಿಗೆ ಷಾಮೀಲಾಗಿ ಬೊಕ್ಕಸಕ್ಕೆ ವಂಚಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಿದ್ಧಾಪುರ ಗ್ರಾಮದ ಸರ್ವೆ ನಂ. 27/3ರ ಮೂವತ್ತು ಗುಂಟೆ ವಿಸ್ತೀರ್ಣದ ಸ್ವತ್ತಿನಲ್ಲಿ ನರ್ಸರಿ ಇದ್ದ ಕಾರಣ, ಅದನ್ನು ಮುಂದುವರಿಸಿಕೊಂಡು ಹೋಗಲು ಮಾಲೀಕರಿಗೆ ಕಾಲಾವಕಾಶ ನೀಡಿ ಮುಂದಿನ ದಿನಗಳಲ್ಲಿ ನರ್ಸರಿ ಮುಚ್ಚುವ ವೇಳೆ ವಶಕ್ಕೆ ಒಪ್ಪಿಸುವಂತೆ ಬಿಡಿಎಗೆ ಮುಚ್ಚಳಿಕೆ ಪತ್ರ ನೀಡಲಾಗಿತ್ತು. ಜತೆಗೆ ಆ ಜಾಗಕ್ಕೆ ಭೂ ಪರಿಹಾವೂ ಬಿಡುಗಡೆ ಮಾಡಲಾಗಿತ್ತು. ಕಳೆದ 5 ವರ್ಷದ ಹಿಂದೆ ನರ್ಸರಿ ಸ್ಥಗಿತಗೊಂಡಿದ್ದರಿಂದ ಬಿಡಿಎ ಅಧಿಕಾರಿಗಳು ಆ ಜಾಗವನ್ನು ಸುಪರ್ದಿಗೆ ಪಡೆಯಬೇಕಿತ್ತು.
ಆದರೆ, ಅಧಿಕಾರಿಗಳ ನಿರ್ಲಕ್ಷ್ಯವನ್ನು ದುರುಪಯೋಗ ಪಡಿಸಿಕೊಂಡಿರುವ ಬಿಲ್ಡರ್ ಅಶೋಕ್ ಧಾರಿವಾಲ್ ತನ್ನ ಆರ್ಥಿಕ ಪ್ರಭಾವ ಬಳಸಿ 100 ಕೋಟಿ ರೂ. ಮೌಲ್ಯ ಹೊಂದಿರುವ ಆ ಜಾಗವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದಕ್ಕಾಗಿ ಆತ ಪರಿಹಾರಧನ ಪಡೆದಿದ್ದ ಭೂ ಮಾಲೀಕನೇ ತನಗೆ ನೋಂದಣಿ ಮಾಡಿಕೊಟ್ಟಿದ್ದರೆಂಬ ನಕಲಿ ಪತ್ರವನ್ನು ಬಳಸಲಾಗಿದೆ ಎಂದು ಅವರು ದೂರಿದ್ದಾರೆ.
ಸದರಿ ಸ್ವತ್ತಿಗೆ ಬಿಲ್ಡರ್ 2024 ಜ.2ರಂದು 23.76 ಕೋಟಿ ರೂ. ಮೊತ್ತ ನಮೂದಿಸಿ ಬೊಮ್ಮನಹಳ್ಳಿ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯದ ಕರಾರು ಪತ್ರ ಮಾಡಿಸಿಕೊಂಡಿದ್ದಾರೆ. ಜತೆಗೆ ಅದೇ ಸ್ವತ್ತನ್ನು ಆರ್.ಆರ್.ನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತನ್ನ ಹೆಸರಿಗೆ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ. ಸೇಲ್ ಅಗ್ರಿಮೆಂಟ್‌ಗೆ ಸಹಿ ಹಾಕಿದ್ದ 23 ಮಂದಿ ಪೈಕಿ ಒಬ್ಬ ವ್ಯಕ್ತಿ ಸಹಿ ಹಾಕದ ಕಾರಣ, ಈ ನೊಂದಣಿ ಪ್ರಕ್ರಿಯೆಯನ್ನು ಪೆಂಡಿಂಗ್ ರಿಜಿಸ್ಟ್ರೇಷನ್ ಎಂದು ಬಾಕಿ ಇಡಲಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯದ ಸ್ವತ್ತನ್ನು ಖಾಸಗಿ ವ್ಯಕ್ತಿ ಪಾಲಾಗಲು ಕರ್ತವ್ಯಲೋಪ ಎಸೆಗಿರುವ ಬಿಡಿಎ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಹಾಗೂ ಬಿಲ್ಡರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಸ್ವತ್ತನ್ನು ಬಿಡಿಎ ವಶಕ್ಕೆ ಪಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಲಾಗಿದೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ.